ಚಿಕ್ಕಮಗಳೂರು: ಬಾಡಿಗೆ ಮನೆಯ ಮಾಲಿಕನೋರ್ವ ಮನೆಯಿಂದ ಹೊರ ಹಾಕಿದ್ದರಿಂದ ತಲೆ ಮೇಲೆ ಸೂರಿಲ್ಲದೆ ಮರದ ಕೆಳಗೆ ಸುಮಾರು 6 ಕುಟುಂಬಗಳು ವಾಸಿಸುತ್ತಿರುವ ಕರುಳು ಚುರುಕ್ ಎನ್ನುವ ಘಟನೆಯೊಂದು ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.
ಆರ್ಥಿಕವಾಗಿ ಕಡು ಬಡತನದಲ್ಲಿರುವ 6 ಕುಟುಂಬಗಳ ಜನರು ಉಪ್ಪಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು. ಇವರು ಆರ್ಥಿಕ ಸಮಸ್ಯೆಯಿಂದ ಸಂಕಷ್ಟದ ಜೀವನ ನಡೆಸುತ್ತಿರುವ ಈ ಕುಟುಂಬಗಳಲ್ಲಿ ಕೆಲವರು ಹೃದಯದ ಸಮಸ್ಯೆಯಂತಹ ತೀವ್ರ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಕುಟುಂಬಗಳು ತಾವು ಈಗಾಗಲೇ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಕಾಲಕ್ಕೆ ಸರಿಯಾಗಿ ಬಾಡಿಗೆ ಕಟ್ಟದಿರುವುದು ಸಹಿತ ವಿವಿಧ ವಿಷಯಗಳು ಸೂರು ಕಳೆದುಕೊಳ್ಳಲು ಕಾರಣವಾಗಿದೆ.
ಕೆಲವು ಕ್ಷುಲ್ಲಕ್ಕ ಕಾರಣಕ್ಕಾಗಿ ರಾತ್ರೋರಾತ್ರಿ ಮಾನವಿಯತೆಯನ್ನು ನೋಡದೆ ಏಕಾಏಕಿ ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ನಾಗವೇಣಿ, ಭಾಗ್ಯ, ಗೀತಾ, ಕುಪ್ಪಮ್ಮ, ಶೋಭಾ, ಡಿ.ಲಕ್ಷ್ಮಿ ಸೇರಿದಂತೆ ಕುಟುಂಬಗಳಲ್ಲಿದ್ದ 20 ಜನರನ್ನು ಹೊರ ಹಾಕಿದ್ದಾರೆ. ಇದರಿಂದ ಆಶ್ರಯಕ್ಕೆ ಬೇರೆ ದಾರಿ ಕಾಣದೆ ಉಪ್ಪಳಿಯಲ್ಲಿರುವ ಜಾಯ್ ಕಾಫಿ ಕ್ಯೂರಿಂಗ್ ಹಿಂಭಾಗದಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿರುವ ಮರದ ಕೆಳಗೆ ದಿನ ಕಳೆದರು. ಇವರಲ್ಲಿ ಸುಮಾರು 12 ಮಂದಿ ಮಕ್ಕಳಿದ್ದು, ಹೆಣ್ಣು ಮಕ್ಕಳು ಸೇರಿದ್ದಾರೆ.