ಮಡಿಕೇರಿ: ದೇಶ ಸೇವೆಯಲ್ಲಿ ತೊಡಗಿ ನಿವೃತ್ತಿಯಾದ ನಂತರ ಜಿಲ್ಲೆಯಲ್ಲಿ ಬಂದು ನೆಲೆಸಿರುವ ಮೂಲನಿವಾಸಿ ಮಾಜಿ ಯೋಧರಿಗೆ ಭೂಮಿಯ ಹಕ್ಕನ್ನು ನೀಡದೆ ಆಡಳಿತ ವರ್ಗ ಅಗೌರವ ತೋರುವ ಮೂಲಕ ದೌರ್ಜನ್ಯದಲ್ಲಿ ತೊಡಗಿದೆ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಆರೋಪಿದೆ. ಮಾಜಿ ಸೈನಿಕರ ಅಧೀನದಲ್ಲಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಬಾರದು ಮತ್ತು ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಜ.20 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷರಾದ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಭಾಗದಲ್ಲಿ ನಿವೃತ್ತ ಸೇನಾಧಿಕಾರಿಗಳಾದ ಕರುಂಬಯ್ಯ ಹಾಗೂ ಕಾರ್ಯಪ್ಪ ಅವರುಗಳ ಜಾಗವನ್ನು ತೆರವುಗೊಳಿಸಿ ಮೊಕದ್ದಮೆ ಹೂಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಲಸಿಗರಿಂದ ಒತ್ತುವರಿಯಾಗಿರುವ ನೂರಾರು ಏಕರೆ ಜಾಗದ ಬಗ್ಗೆ ತಕರಾರು ಎತ್ತದ ಅಧಿಕಾರಿಗಳು ದೇಶ ಸೇವೆ ಮಾಡಿ ಬಂದ ಮೂಲ ನಿವಾಸಿ ಮಾಜಿ ಸೈನಿಕರು ಹೊಂದಿರುವ ಅಲ್ಪ ಪ್ರಮಾಣದ ಭೂಮಿಯ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕರುಂಬಯ್ಯ ಹಾಗೂ ಕಾರ್ಯಪ್ಪ ಅವರುಗಳು ಕಳೆದ 40 ವರ್ಷಗಳಿಂದ ತಮ್ಮ ಬಳಿ ಇದ್ದ ಭೂಮಿಯಲ್ಲಿ ತೋಟ ಮಾಡಿಕೊಂಡು ನಿವೃತ್ತ ಜೀವನ ಕಳೆಯುತ್ತಿದ್ದಾರೆ. ಇಷ್ಟು ದಿನಗಳಾದ ನಂತರ ತೆರವು ಕಾರ್ಯಾಚರಣೆ ನಡೆಸಿರುವುದು ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿ.ಎ.ಕಾರ್ಯಪ್ಪ, ಇದು ಮಾಜಿ ಸೈನಿಕರಿಗೆ ಮಾಡುತ್ತಿರುವ ಅಗೌರವವೆಂದು ಆರೋಪಿಸಿದರು. ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಾಜಿ ಸೈನಿಕರನ್ನು ಕಡೆಗಣಿಸಲಾಗುತ್ತಿದ್ದು, ಇದೇ ಕಾರಣಕ್ಕೆ ರಾಜ್ಯದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸೇವೆಗೆ ಸೇರ್ಪಡೆಗೊಳ್ಳುತ್ತಿಲ್ಲವೆಂದು ಅಭಿಪ್ರಾಯಪಟ್ಟರು. ಮಾಜಿ ಸೈನಿಕರ ಜಾಗ ತೆರವಿಗೆ ಬಳಸಲಾಗುವ ಜೆಸಿಬಿಯನ್ನು ಮೊದಲು ನನ್ನ ಮೇಲೆ ಹಾಯಿಸಲಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಮಗೆ ರಕ್ಷಣೆ ನೀಡಬೇಕು. ಆದರೆ, ಯಾರೂ ಮಾಜಿ ಸೈನಿಕರ ಪರವಾಗಿ ಮಾತನಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಪಾಲೇಮಾಡು ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸುಮಾರು 300 ಕುಟುಂಬಗಳಿಗೆ ನೆಲೆ ನೀಡಲಾಗಿದೆ. ದಿಡ್ಡಳ್ಳಿಯಲ್ಲಿ ಕೂಡ ಓಟ್ ಬ್ಯಾಂಕ್ ರಾಜಕಾರಣವೆ ನಡೆಯುತ್ತಿದೆಯೆಂದು ಆರೋಪಿಸಿದ ಕಾರ್ಯಪ್ಪ, ಮಾಜಿ ಸೈನಿಕರಿಗೆ ಜಿಲ್ಲೆಯಲ್ಲಿ ಏನಾದರು ತೊಂದರೆಯಾದರೆ ಸುಮ್ಮನಿರಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದರು.
ದೇಶವನ್ನು ಕಾಯುವ ಸೈನಿಕರಿಗೆ ನಿವೃತ್ತಿಯಾದ ನಂತರ 5 ರಿಂದ 10 ಏಕರೆ ಜಾಗವನ್ನು ನೀಡಬೇಕೆನ್ನುವ ನಿಯಮವಿದೆ. 1971ರವರೆಗೆ ಸುಲಭವಾಗಿ ಭೂ ಮಂಜೂರಾತಿಯಾಗುತ್ತಿತ್ತು. ಆದರೆ, 1991 ರ ನಂತರ ಎಲ್ಲಾ ಪ್ರದೇಶವನ್ನು ಅರಣ್ಯ, ಗೋಮಾಳ ಎಂದೆಲ್ಲ ಹೇಳುತ್ತಾ ನಿವೃತ್ತ ಸೈನಿಕರಿಗೆ ಜಮೀನು ನೀಡದೆ ಸತಾಯಿಸಲಾಗುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಸುಬೋದ್ ಯಾದವ್ ಅವರು ನಿವೃತ್ತ ಸೈನಿಕರಿಗೆ ಜಮೀನು ನೀಡಲು ಸಜ್ಜಾಗಿದ್ದರಾದರೂ ನಂತರ ಬಂದ ಜಿಲ್ಲಾಧಿಕಾರಿಗಳು ಅಷ್ಟೇನು ಕಾಳಜಿ ತೋರಿಲ್ಲ. ಮಾಜಿ ಸೈನಿಕರ ಅದಾಲತ್ ನಡೆಸುವುದೆ ಅಪರೂಪವಾಗಿದೆಯೆಂದು ಬಿ.ಎ. ಕಾರ್ಯಪ್ಪ ಆರೋಪಿಸಿದರು.
ವಲಸಿಗರಿಗೆ, ರೆಸಾರ್ಟ್ ಗಳಿಗೆ, ದೊಡ್ಡ ದೊಡ್ಡ ಕಂಪೆನಿಗಳಿಗೆ ಜಾಗದ ಆರ್ಟಿಸಿ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಆದರೆ, ನಿವೃತ್ತ ಸೈನಿಕರಿಗೆ ಕಂದಾಯ ಇಲಾಖೆಯಲ್ಲಿ ಆರ್ಟಿಸಿ ಅಲ್ಲದೆ ಕನಿಷ್ಠ ಗೌರವ ಕೂಡ ದೊರಕುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನಿವೃತ್ತ ಸೈನಿಕರ ಪರವಾಗಿ ಗ್ರಾಮ ಗ್ರಾಮಗಳಲ್ಲಿ ಜನರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದ ಕಾರ್ಯಪ್ಪ, ನಿವೃತ್ತ ಸೈನಿಕರ ಅಧೀನದಲ್ಲಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಬಾರದೆಂದು ಒತ್ತಾಯಿಸಿದರು. ಜ.20 ರಂದು ನಗರದ ಜ. ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮಾಜಿ ಸೈನಿಕರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಿವೃತ್ತ ಸೈನಿಕರು ಆಗಮಿಸಲಿದ್ದಾರೆ ಎಂದರು.
ಮೊದಲ ಪ್ರಯತ್ನವಾಗಿ ಶಾಂತಿಯುತ ಹೋರಾಟ ನಡೆಸಲಿದ್ದು, ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಗೌರವ ಕಾರ್ಯದರ್ಶಿ ಮೇಜರ್ ಒ.ಎಸ್. ಚಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮಂದಿ ಮಾಜಿ ಸೈನಿಕರಿದ್ದು, ಸರ್ಕಾರಿ ಅಧಿಕಾರಿಗಳು ಇವರನ್ನು ಹೊರಗಿನವರಂತೆ ಕಾಣುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನಿವೃತ್ತ ಸೈನಿಕರಿಗೆ ಭೂ ಮಾಲಿಕತ್ವ ನೀಡುವ ಕುರಿತು ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ತಿಳುವಳಿಕೆಯೇ ಇಲ್ಲವೆಂದು ಟೀಕಿಸಿದ ಅವರು, ಜಿಲ್ಲೆಯಲ್ಲಿ ಒತ್ತುವರಿ ಆಗಿರುವ ನೂರಾರು ಏಕರೆ ಸರ್ಕಾರಿ ಭೂಮಿಯನ್ನು ಯಾಕೆ ತೆರವುಗೊಳಿಸುತ್ತಿಲ್ಲವೆಂದು ಪ್ರಶ್ನಿಸಿದರು.
ಅಮ್ಮತ್ತಿಯಲ್ಲಿ ನಡೆದ ತೆರವು ಕಾರ್ಯಾಚರಣೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದಲೆ ನಡೆದಿದೆಯೇ ಹೊರತು ಯಾವುದೇ ಸಚಿವರ ಅಥವಾ ಹಿರಿಯ ಅಧಿಕಾರಿಗಳ ಆದೇಶದಿಂದ ಅಲ್ಲವೆಂದು ಚಿಂಗಪ್ಪ ಅಭಿಪ್ರಾಯಪಟ್ಟರು. ಜ.20 ನಡೆಯುವ ಪ್ರತಿಭಟನೆ ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆಯೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಕರ್ನಲ್ ಚಿಣ್ಣಪ್ಪ, ಸದಸ್ಯರಾದ ಕರ್ನಲ್ ಜೋಯಪ್ಪ, ಶನಿವಾರಸಂತೆ ವಿಭಾಗದ ಅಧ್ಯಕ್ಷರಾದ ಧರ್ಮಪ್ಪ, ಹಾಗೂ ಸೋಮವಾರಪೇಟೆ ಅಧ್ಯಕ್ಷರಾದ ಈರಪ್ಪ ಉಪಸ್ಥಿತರಿದ್ದರು.