ಮಡಿಕೇರಿ: ಗಿರಿಜನರ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಮಾರು 10 ವರ್ಷಗಳ ಹಿಂದೆಯೇ ಜಾರಿಗೊಂಡ ಅರಣ್ಯ ಹಕ್ಕು ಕಾಯಿದೆ ಬಗ್ಗೆ ಸರಕಾರ ಮತ್ತು ಇಲಾಖಾಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆ ತೋರಿದ್ದರಿಂದ ಇಂದು ಗಿರಿಜನ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕೊಡಗು ಜಿಲ್ಲಾ ಬುಡಕಟ್ಟು ಸಂಘದ ಜಿಲ್ಲಾಧ್ಯಕ್ಷ ಜೆ. ಪಿ. ರಾಜು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿರುವ ಪ್ರತಿಯೊಂದು ಆದಿವಾಸಿ ಗಿರಿಜನ ಸಮುದಾಯಗಳ ಹಾಡಿಗಳಿಗೆ ಜಿಲ್ಲಾಡಳಿತ ಕಡ್ಡಾಯವಾಗಿ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ನೈಜ ಗಿರಿಜನರಿಗೆ ಸರಕಾರದ ಅರಣ್ಯ ಹಕ್ಕು ಕಾಯ್ದೆಯನ್ವಯ ವಸತಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.
ದಿಡ್ಡಳ್ಳಿ ಗಿರಿಜನ ಆದಿವಾಸಿ ಸಮುದಾಯದವರಿಗೆ ಕೂಡಲೇ ಸರಕಾರ ಸ್ಪಂದಿಸಿ ಸರಕಾರ ಸೂರು ಕಲ್ಪಿಸಬೇಕು, ಜೊತೆಗೆ ಜಿಲ್ಲೆಯಲ್ಲಿರುವ ಎಲ್ಲಾ ಗಿರಿಜನ ಸಮುದಾಯದವರಿಗೆ ಅರಣ್ಯ ಹಕ್ಕು ಕಾಯಿದೆ ಪ್ರಕಾರ ಹಕ್ಕು ಪತ್ರ ಸಹಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಸರಕಾರವನ್ನು ಆಗ್ರಹಿಸಿದರು.
ದಿಡ್ಡಳ್ಳಿಯಂತೆ ಜಿಲ್ಲೆಯ ಯಡವನಾಡು, ಬಾಣವಾರ ಸೇರಿದಂತೆ ಬಹಳಷ್ಟು ಗಿರಿಜನ ಆದಿವಾಸಿ ಸಮುದಾಯಗಳ ಹಾಡಿಗಳಿದ್ದು ಈ ಹಾಡಿಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ಆದಿವಾಸಿಗಳಿಗೆ ವಸತಿ ನಿವೇಶನ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.
ಬುಡಕಟ್ಟು ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಜೆ. ಕೆ. ರಾಮು ಮಾತನಾಡಿ, ದಿಡ್ಡಳ್ಳಿ ಮಾತ್ರವಲ್ಲ, ಅದರ ಪಕ್ಕದಲ್ಲಿಯೂ ಗಿರಿಜನರ ಹಾಡಿಗಳಿದ್ದು ಇಲ್ಲೂ ಕೂಡ ಬಹಳಷ್ಟು ವರ್ಷಗಳಿಂದ ಗಿರಿಜನರು ವಾಸವಾಗಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ, ಅವರುಗಳಿಗೂ ಕೂಡ ಸರಕಾರ ಮತ್ತು ಇಲಾಖಾಧಿಕಾರಿಗಳು ಸ್ಪಂದನೆ ನೀಡುವ ಮೂಲಕ ಸರಕಾರದ ಸವಲತ್ತುಗಳನ್ನು ಒದಗಿಸುವಂತೆ ಆಗ್ರಹಿಸಿದರು.
ನಾಡಿ, ದಿಡ್ಡಳ್ಳಿಯಲ್ಲಿರುವ ಮುಷ್ಕರ ನಿರತ ಗಿರಿಜನರ ದಾಖಲೆ ಪತ್ರಗಳನ್ನು ಪರಿಶೀಲಿಸಿ ನೈಜ ವಂಚಿತ ಗಿರಿಜನರಿಗೆ ಸವಲತ್ತುಗಳನ್ನು ನೀಡಬೇಕು. ಲೈನ್ ಮನೆಗಳಿಂದ ಹೊರಬಂದವರಿಗೆ ಕೂಡ ಇಲ್ಲಿ ಸೂರು ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು ಈಗಾಗಲೇ ಸರಕಾರ ಒಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಆ ಹಣದಿಂದ ಭಿಕ್ಷುಕರಿಗೆ ಭಿಕ್ಷೆ ಹಾಕುವಂತೆ ಕೇವಲ ಪಾತ್ರೆ, ಟಾರ್ಪಲ್, ನೀರು, ಒಂದಷ್ಟು ಆಹಾರ ಪದಾರ್ಥಗಳನ್ನು ನೀಡುತ್ತಿರುವುದು ಖಂಡನೀಯ ಎಂದರು. ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಹಾಡಿಗಳಿವೆಯೋ ಅದೇ ಹಾಡಿಗಳಲ್ಲಿ ಅಲ್ಲಿಯ ಗಿರಿಜನ ಸಮುದಾಯದವರಿಗೆ ವಸತಿ ಸೌಲಭ್ಯ ಮತ್ತು ಸರಕಾರದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.