ಮಡಿಕೇರಿ: ನಟ ಚೇತನ್ ವಿರುದ್ಧ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ ಆರೋಪ ಬಂದಿದ್ದು ಈ ಸಂಬಂಧ ಕೊಡಗಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕಾವೇರಿ ಸೇನೆಯ ಪ್ರಧಾನ ಸಂಚಾಲಕ ಕೆ.ಎ.ರವಿಚಂಗಪ್ಪ ಅವರು ದೂರು ನೀಡಿದ್ದು, ಮಾಲ್ದಾರೆ ಸನಿಹದ ದಿಡ್ಡಳ್ಳಿ ಗಿರಿಜನರ ತಾತ್ಕಾಲಿಕ ಶಿಬಿರ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಆರೋಪವಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಡಿಡ್ಡಳ್ಳಿಯಲ್ಲಿ ಗುಡಿಸಲು ಕಳೆದುಕೊಂಡ ಗಿರಿಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಗ ಅವರ ಪರವಾಗಿ ನಿಂತ ಚೇತನ್ ಗಿರಿಜನರ ಸಮಸ್ಯೆ ಬಗೆಹರಿಸಿ ಅವರಿಗೆ ಸೂರು ಕಲ್ಪಿಸಿಕೊಡಿ ಎಂದು ಖುದ್ದು ದಿಡ್ಡಳ್ಳಿಗೆ ಬಂದು ಅವರೊಂದಿಗೆ ಧರಣಿ ಕುಳಿತು ಹೋರಾಟ ನಡೆಸಿದ್ದರಲ್ಲದೆ, ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.
ಈ ಪ್ರಕರಣಕ್ಕೆ ತೆರೆಬಿದ್ದು ಬಹಳ ದಿನಗಳ ನಂತರ ಇದೀಗ ಕಾವೇರಿ ಸೇನೆ ಸಂಘಟನೆಯ ಪ್ರಧಾನ ಸಂಚಾಲಕ ಕೆ.ಎ. ರವಿಚಂಗಪ್ಪ ಅವರು ಕಳೆದ ಡಿಸೆಂಬರ್ 22 ಮತ್ತು 23 ರಂದು ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಹಾಗೂ ಬೆಂಗಳೂರಿನ ಚಿತ್ರನಟ ಚೇತನ್ ಮತ್ತು ಸುಮಾರು 50 ಮಂದಿ ಕಾನೂನು ವಿರೋಧಿಸಿ ದಿಡ್ಡಳ್ಳಿಯ ಗಿರಿಜನ ತಾತ್ಕಾಲಿಕ ವಸತಿ ಕೇಂದ್ರಕ್ಕೆ ಅತಿಕ್ರಮ ಪ್ರವೇಶಿಸಿದ್ದಾರೆ. ಈ ಪ್ರದೇಶವು ಮೀಸಲು ಅರಣ್ಯಕ್ಕೆ ಒಳಪಟ್ಟಿದ್ದು, ಜಿಲ್ಲಾಧಿಕಾರಿಯವರು ಸೆಕ್ಷನ್ 144ನ್ನು ಜಾರಿಗೊಳಿಸಿದ್ದರೂ ಅದನ್ನು ಉಲ್ಲಂಘಿಸಿ ಈ ಗುಂಪು ಅಲ್ಲಿಗೆ ಪ್ರವೇಶಿಸಿದೆ. ಪ್ರಮುಖರು ಕರ್ನಾಟಕ ಸರಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅರಣ್ಯಾಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಕಾನೂನು ಭಂಗ ಮಾಡಿರುವವರ ವಿರುದ್ಧ ಪೊಲೀಸರು ಸೆಕ್ಷನ್ 141 ಮತ್ತು 142ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಡಿ.23 ರಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರು ದಿಡ್ಡಳ್ಳಿ ಪ್ರದೇಶಕ್ಕೆ ಆಗಮಿಸಿದ್ದರಿಂದ ಜಿಲ್ಲಾಧಿಕಾರಿ 144 ಸೆಕ್ಷನನ್ನು ಸಡಿಲಗೊಳಿಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಯಾವ ರೀತಿಯ ರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.