ಸೋಮವಾರಪೇಟೆ: ಟಿಪ್ಪರ್ ಹಾಗೂ ಬೈಕ್ ನಡುವಿನ ಮುಖಾಮುಖಿ ಡಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲ್ಕಂದೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಕಲ್ಲಂದೂರು ಬಾಣೆಯ ಕಾರ್ಮಿಕರಾದ ಶಿವ ಎಂಬವರ ಪುತ್ರ ಜಗದೀಶ್(28) ಮೃತಪಟ್ಟವರು.
ಬೆಳಿಗ್ಗೆ 9ಗಂಟೆಯ ಸಮಯದಲ್ಲಿ ಜಗದೀಶ್ ತನ್ನ ಬೈಕ್ ನಲ್ಲಿ ತೋಳೂರುಶೆಟ್ಟಳ್ಳಿ ಕಡೆಗೆ ತೆರಳುತ್ತಿದ್ದ ಸಂದರ್ಭ, ತೋಳೂರುಶೆಟ್ಟಳ್ಳಿ ಕಡೆಯಿಂದ ಸೋಮವಾರಪೇಟೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಲೆ ಭಾಗಕ್ಕೆ ತೀವ್ರ ಗಾಯವಾದ ಪರಿಣಾಮ ಸ್ಥಳದಲ್ಲೇ ಜಗದೀಶ್ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಗಂಡನನ್ನು ಕಳೆದುಕೊಂಡ ಪತ್ನಿಯ ರೋಧನ ಮುಗಿಲು ಮುಟ್ಟಿತು. ತಂದೆಯ ಸಾವಿನ ಬಗ್ಗೆ ಏನೂ ತಿಳಿಯದ ಮಕ್ಕಳ ಮುಗ್ದತೆ ಮನಕಲಕುವಂತಿತ್ತು. ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.