ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅಭಯಾರಣ್ಯಕ್ಕೆ ತೆರಳಿ ಸಫಾರಿ ನಡೆಸುವವರಿಗೆ ಇನ್ನು ಮುಂದೆ ಹೊಸ ಅನುಭವ ಸಿಗಲಿದೆ. ಕಾರಣ ಸಫಾರಿಗೆ ಪ್ರವಾಸಿಗರನ್ನು ಪರಿಸರ ಸ್ನೇಹಿ ಬಸ್ ಕರೆದೊಯ್ಯಲಿದೆ.
ಶಬ್ದ, ಹೊಗೆಯ ಕಿರಿಕಿರಿಯಿಲ್ಲದೆ ಪ್ರವಾಸಿಗರು ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ. ಈಗಾಗಲೇ ಸಫಾರಿಗಾಗಿ ಮಾಮೂಲಿ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದೆಯಾದರೂ ಇದೀಗ ಪರಿಸರ ಸ್ನೇಹಿ ಬಸ್ ಅನ್ನು ಖರೀದಿ ಮಾಡಲಾಗಿದೆ. ಪ್ರಾಯೋಗಿಕವಾಗಿ ಪ್ರವಾಸಿಗರನ್ನು ಕರೆದೊಯ್ಯುವ ಕಾರ್ಯವನ್ನು ಈ ಬಸ್ ಮಾಡುತ್ತಿದೆ. ಎಲ್ಲವೂ ಸರಿಹೋಗುತ್ತದೆ ಎನ್ನುವುದು ಕಂಡು ಬಂದಿದ್ದೇ ಆದಲ್ಲಿ ಡೀಸೆಲ್, ಪೆಟ್ರೋಲ್ ಬಳಕೆಯ ವಾಹನಗಳ ಬಳಕೆಗೆ ಅಂತ್ಯ ಹಾಡಿ ಪರಸರ ಸ್ನೇಹಿ ಬಸ್ ಅನ್ನೇ ಮುಂದುವರೆಸುವ ಚಿಂತನೆ ನಡೆದಿದೆ.
ಅರಣ್ಯದಲ್ಲಿ ಸಫಾರಿಗೆ ಈ ಬಸ್ನ್ನು ಬಳಕೆ ಮಾಡುತ್ತಿರುವುದರಿಂದ ಸಾಧಕ-ಬಾಧಕಗಳನ್ನು ಕೂಡ ಪರಿಗಣಿಸಲಾಗುತ್ತಿದೆ. ಇದರಿಂದ ಯಾವ ರೀತಿಯ ಅನುಕೂಲ ಮತ್ತು ಅನಾನುಕೂಲದ ಬಗ್ಗೆಯೂ ನೋಡಲಾಗುತ್ತಿದೆ. ಮಹಾರಾಷ್ಟ್ರ ಮೂಲದ ರೆವೊಲೊ ಕಂಪನಿ ನಿರ್ಮಾಣ ಮಾಡಿರುವ ಬಸ್ ನೋಡಲು ಸುಂದರ ಮತ್ತು ಪ್ರಯಾಣಕ್ಕೆ ಸುಖಕರವಾಗಿದೆ.
ನಗರಗಳ ರಸ್ತೆಯಲ್ಲಿ ಇದು ಸರಾಗವಾಗಿ ಓಡಾಡುತ್ತದೆ. ಆದರೆ ಬಂಡೀಪುರದಲ್ಲಿ ಇದನ್ನು ಕಾಡಿನಲ್ಲಿ ಸಫಾರಿಗೆ ಬಳಸಿಕೊಳ್ಳುತ್ತಿರುವುರಿಂದ ವ್ಯತ್ಯಾಸ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ಇದರ ಬಳಕೆಯನ್ನು ಒಂದಷ್ಟು ದಿನಗಳ ಕಾಲ ಮಾಡಿ ಸಫಾರಿಗೆ ಉತ್ತಮ ವಾಹನ ಎಂಬುದು ಮನದಟ್ಟಾದರೆ ಮಾತ್ರ ಇದೇ ರೀತಿಯ ಇನ್ನಷ್ಟು ಬಸ್ ಗಳನ್ನು ಬಂಡೀಪುರ ಜಂಗಲ್ ರೆಸಾರ್ಟ್ಸ್ ಹಾಗೂ ಲಾಡ್ಜಿಂಗ್ಸ್ ಖರೀದಿ ಮಾಡಲಿದೆ.
ಬಸ್ ನಲ್ಲಿ 4 ಶಕ್ತಿಶಾಲಿ ಬ್ಯಾಟರಿಗಳನ್ನು ಅಳವಡಿಸಿದ್ದು, ಇದನ್ನು ಚಾರ್ಜ್ ಮಾಡಲು ಪ್ರತ್ಯೇಕ ವ್ಯವಸ್ಥೆಯಿದೆ. ಅಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ದೂರ ಬಸ್ ಸಂಚಾರ ಸಾಧ್ಯವಾಗಲಿದೆ. ಪ್ರಾಯೋಗಿಕವಾಗಿ ಬಸ್ನ್ನು ಸಫಾರಿಗೆ ಬಳಸಿದ ಸಂದರ್ಭ ಶೇ.40ರಷ್ಟು ಬ್ಯಾಟರಿ ಬಳಕೆಯಾಗಿದೆ. ಹೀಗಾಗಿ ಒಮ್ಮೆ ಚಾರ್ಜ್ ಮಾಡಿದರೆ ಎರಡು ಬಾರಿ ಸಫಾರಿ ನಡೆಸಲು ಸಾಧ್ಯವಾಗಲಿದೆ.
ಈಗ ಖರೀದಿಸಿರುವ ಬಸ್ 20 ಸೀಟನ್ನು ಹೊಂದಿದ್ದು, ಈ ಬಸ್ ಅನ್ನು ಸಫಾರಿಗೆ ಬಳಕೆ ಮಾಡಿಕೊಳ್ಳುವುದರಿಂದ ಅನುಕೂಲಕರವಾಗುತ್ತದೆ ಎಂಬುದು ಖಚಿತವಾದರೆ ಮುಂದೆ 16 ಸೀಟಿನ ಬಸ್ಗಳ ಖರೀದಿಗೆ ಜಂಗಲ್ ರೆಸಾರ್ಟ್ ಮತ್ತು ಲಾಡ್ಜಿಂಗ್ ಮುಂದಾಗಲಿದೆ. ತಕ್ಷಣಕ್ಕೆ ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ಬಂಡೀಪುರ ಸಫಾರಿಗೆ ಯೋಗ್ಯ ಎಂಬುದು ಕಂಡು ಬಂದದ್ದೇ ಆದರೆ ಪರಿಸರ ಸ್ನೇಹಿ ಬಸ್ ಹವಾ ಹೆಚ್ಚಲಿದೆ.
ಪರಿಸರ ಸ್ನೇಹಿ ಬಸ್ ಬಳಕೆಗೆ ಫೆ 21, 2015ರಂದು ಸಂಸತ್ ಭವನದಲ್ಲಿ ಹಸಿರು ಬಾವುಟ ತೋರಿಸುವ ಮೂಲಕ ಪ್ರಧಾನಿ ನರೇಂದ್ರಮೋದಿಯವರು ಚಾಲನೆ ನೀಡಿದ್ದನ್ನು ಇಲ್ಲಿ ನಾವು ಸ್ಮರಿಸಬಹುದಾಗಿದೆ.