ಮಡಿಕೇರಿ : ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ನುಡಿದಂತೆ ನಡೆದುಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ತಿಳಿಸಿದ್ದಾರೆ.
ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಂಗಳವಾರ ಜನಪ್ರತಿನಿಧಿಗಳು, ಆದಿವಾಸಿ ಮುಖಂಡರು ಅಧಿಕಾರಿಗಳು ಮತ್ತಿತರರೊಂದಿಗೆ ನಡೆದ ಸಭೆಯಲ್ಲಿ ಸಚಿವರು ಮಾತನಾಡಿದರು. ಈಗಾಗಲೇ ಕುಶಾಲನಗರ ಹೋಬಳಿಯ ಬಸವನಹಳ್ಳಿಯಲ್ಲಿ 6.70 ಎಕರೆಯಲ್ಲಿ 181 ನಿವೇಶನ, ರಾಂಪುರ ಗ್ರಾಮದ 10 ಎಕರೆ ಜಾಗದಲ್ಲಿ 184 ನಿವೇಶನ ಹಾಗೂ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ 7.50 ಎಕರೆಯಲ್ಲಿ 166 ಒಟ್ಟು 531 ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಕಟಿಸಿದರು.
ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನಿರಾಶ್ರಿತರು ಒದಗಿಸಬೇಕು. ಈ ದಾಖಲೆಗಳನ್ನು ಪರಿಶೀಲಿಸಿ ನಿಜವಾದ ಅರ್ಹ ಮೂಲ ನಿವಾಸಿ ಆದಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಎಂ.ಆರ್.ಸೀತಾರಾಂ ಅವರು ಹೇಳಿದರು.
ಈಗಾಗಲೇ ಪಟ್ಟಿಯಲ್ಲಿ ನೀಡಲಾಗಿರುವ ಹೆಸರನ್ನು ಬದಲಾಯಿಸಬಾರದು. ಸ್ಥಳೀಯ ಅರ್ಹ ಆದಿವಾಸಿಗಳಿಗೆ ನಿವೇಶನ ಒದಗಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ ಒಂದು ವಾರದೊಳಗೆ ಅಗತ್ಯ ದಾಖಲೆಗಳ ಪಟ್ಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬುಡಕಟ್ಟು ಸಮುದಾಯದ ಪ್ರಮುಖರಾದ ಚಂದ್ರು ಅವರು ನಿಜವಾದ ಆದಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ಕುಶಾಲನಗರ ಬಳಿಯ ಬಸವನಹಳ್ಳಿ ಹಾಗೂ ರಾಂಪುರದಲ್ಲಿ ಗುರುತಿಸಿರುವ ಭೂಮಿಯನ್ನು ಸೋಮವಾರಪೇಟೆ ತಾಲ್ಲೂಕಿನ ಆದಿವಾಸಿಗಳಿಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ದಿಡ್ಡಳ್ಳಿಯ ನಿರಾಶ್ರಿತರು ಜಿಲ್ಲೆಯ ಮೂರು ತಾಲ್ಲೂಕಿನವರಾಗಿದ್ದಾರೆ. ಆದ್ದರಿಂದ ಎಲ್ಲಾ ಬಡ ಮೂಲನಿವಾಸಿ ಅರ್ಹ ಗಿರಿಜನರಿಗೆ ನಿವೇಶನ ಒದಗಿಸಲು ಸರ್ಕಾರ ಹಂತ ಹಂತವಾಗಿ ಕ್ರಮಕೈಗೊಳ್ಳಲಿದೆ. ಸದ್ಯ ದಿಡ್ಡಳ್ಳಿಯ ನಿರಾಶ್ರಿತರಿಗೆ ಪ್ರಥಮ ಆದ್ಯತೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಸಚಿವರು ಮನವಿ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ದಿಡ್ಡಳ್ಳಿಯಲ್ಲಿನ ಗಿರಿಜನರು ಮೂಲತಃ ಆದಿವಾಸಿಗಳಾಗಿದ್ದು, ಇವರಿಗೆ ನಿವೇಶನ ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ಸಹಕರಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿಯು ಸಹ ಅರ್ಹರಿಗೆ ಅರಣ್ಯ ಹಕ್ಕು ಪತ್ರವನ್ನು ನೀಡಲಾಗುತ್ತದೆ. ಆ ಕಾರ್ಯವು ಎಂದಿನಂತೆ ನಡೆಯಲಿದೆ ಎಂದು ಅವರು ತಿಳಿಸಿದರು.
ಹಾಗೆಯೇ 94ಸಿ ನಡಿ ಅರ್ಜಿ ಸಲ್ಲಿಸುವವರಿಗೆ ಅದು ಸಹ ಕಾರ್ಯಗತಗೊಳ್ಳಲಿದೆ. ಯಾರೂ ಸಹ ಗೊಂದಲ ನಿರ್ಮಾಣ ಮಾಡುವುದು ಬೇಡ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿ ಕೊಡಿ, ಇಲ್ಲಿ ಕೊಡಿ. ಇಲ್ಲಿ ಬೇಡ, ಅಲ್ಲಿ ನೀಡಿ ಎಂದು ತಮ್ಮ ತಮ್ಮಲ್ಲಿಯೇ ಗೊಂದಲ ನಿರ್ಮಿಸಿದರೆ ಯಾವುದೇ ಕಾರ್ಯಗಳು ನಡೆಯುವುದಿಲ್ಲ ಎಂದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ದಿಡ್ಡಳ್ಳಿಯ ನಿರಾಶ್ರಿತ ಅರ್ಹ ಕುಟುಂಬಗಳಿಗೆ 30*30 ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಸೋಮವಾರಪೇಟೆ ತಾ.ಪಂ.ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್ ಅವರು ಮಾತನಾಡಿದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿ.ಪಂ. ಸಿಇಓ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಡಿವೈಎಸ್ಪಿ ಛಬ್ಬಿ, ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.