ಮಡಿಕೇರಿ: ಖಾಸಗಿ ನರ್ಸರಿ ಶಾಲೆಗಳಂತೆ ಅಂಗನವಾಡಿಗಳು ಬದಲಾಗಿ, ಅಲ್ಲಿನ ಮಕ್ಕಳು ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ ಎಲ್ಲದರಲ್ಲೂ ಮುಂದೆ ಬರಬೇಕೆಂಬ ಆಶಾಭಾವನೆ ಹೊಂದಿ, ತಮ್ಮದೇ ಕಾರ್ಯ ವ್ಯಾಪ್ತಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಸಾಧ್ಯ ಮಾಡಿ ತೋರಿಸುವ ಕಾರ್ಯಕ್ಕೆ ಮಡಿಕೇರಿಯಲ್ಲಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮುಂದಾಗಿದ್ದಾರೆ.
ಅವರ ದೂರದೃಷ್ಠಿತ್ವ, ಸಾಧನಾ ಪ್ರವೃತ್ತಿ, ಎಲ್ಲರ ಸಹಕಾರ ಪಡೆದು ಮಂದಡಿಯಿಡುವ ಗುಣದಿಂದಾಗಿ ಅಂಗನವಾಡಿಯನ್ನು ಕೂಡ ಖಾಸಗಿ ನರ್ಸರಿಗಿಂತ ಕಡಿಮೆಯಿಲ್ಲ ಎಂಬಂತೆ ಅಭಿವೃದ್ಧಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬಡ ಮಕ್ಕಳೇ ಹೆಚ್ಚಾಗಿ ಬರುವ ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ ನೀಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದು ಕಷ್ಟದ ಕೆಲಸ ಎಂಬ ಅರಿವು ಸವಿತಾ ಕೀರ್ತನ್ ಅವರಲ್ಲಿತ್ತು. ಇದು ತನ್ನೊಬ್ಬರಿಂದ ಆಗುವ ಕೆಲಸವೂ ಅಲ್ಲ ಎಂಬುದು ಕೂಡ ಗೊತ್ತಿತ್ತು. ಹೀಗಾಗಿ ಪ್ರತಿ ಅಂಗನವಾಡಿ ಕೇಂದ್ರದ ಸುತ್ತಲಿರುವ ಸಾರ್ವಜನಿಕರು, ಮಕ್ಕಳ ಪೋಷಕರು, ಜನಪ್ರತಿನಿಧಿಗಳು, ಯುವಕ, ಯುವತಿ, ಮಂಡಳಿ, ಸ್ತ್ರೀಶಕ್ತಿ ಸಂಘಗಳು, ದಾನಿಗಳು, ಹೀಗೆ ಹಲವರ ಸಹಾಯ ಪಡೆದು ಅವರನ್ನು ಅಂಗನವಾಡಿ ಕಡೆಗೆ ಸೆಳೆದು ಅವರಿಂದಲೇ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಮುಂದಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.
ಸಾಮಾನ್ಯವಾಗಿ ತಮ್ಮದೆಷ್ಟು ಕೆಲಸವಿದೆಯೋ ಅಷ್ಟು ಮಾಡಿಕೊಂಡು ಹೋಗೋಣ ಸರ್ಕಾರ ಸಂಬಳ ನೀಡುತ್ತದೆ ಇನ್ನೇನು ಬೇಕು? ನಮಗ್ಯಾಕೆ ಊರಿಗಿಲ್ಲದ ಉಸಾಬರಿ ಎಂಬ ಮನೋಭಾವದವರೇ ಹೆಚ್ಚಾಗಿರುವ ಈ ಕಾಲದಲ್ಲಿ ಏನಾದರೊಂದು ಒಳಿತನ್ನು ಮಾಡಲು ಹೊರಟ ಸವಿತಾ ಕೀರ್ತನ್ ಇತರರಿಗೆ ಮಾದರಿಯಾಗಿದ್ದಾರೆ.
ಸೆಪ್ಟಂಬರ್ 2015ರಿಂದ ಅಂಗನವಾಡಿಗಳ ಅಭಿವೃದ್ಧಿಗೆ ಮುಂದಾದ ಇವರು ದಾನಿಗಳು ಸ್ವ ಇಚ್ಚೆಯಿಂದ ನೀಡುವ ಪದಾರ್ಥಗಳನ್ನು ಸ್ವೀಕರಿಸಿ ಆ ಮೂಲಕ ಒಂದಷು ಉತ್ತಮ ಕಾರ್ಯವನ್ನು ಆರಂಭಿಸಿದರು. ಖಾಸಗಿ ನರ್ಸರಿಗಳಂತೆಯೇ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೆ, ಮಕ್ಕಳಿಗೆ ಶುಚಿತ್ವ, ಶಿಸ್ತು, ಕಲಿಕೆಗೆ ಒತ್ತು ನೀಡಿ ಸಮವಸ್ತ್ರ, ಗೋಡೆ ಬರಹ, ಆಟಿಕೆ, ಕಲಿಕೆಗೆ ಬೇಕಾದ ಸಾಮಗ್ರಿ, ಜತೆಗೆ ಅಗತ್ಯವಿರುವ ಕುರ್ಚಿ, ಕಪಾಟು, ಮಕ್ಕಳಿಗೆ ಮಧ್ಯಾಹ್ನ ಮಲಗಲು ಹಾಸಿಗೆ ವ್ಯವಸ್ಥೆಯನ್ನು ಮಾಡಿದರು.
ಇದೆಲ್ಲದರ ಜತೆಜತೆಯಲ್ಲೇ ಚಿಕ್ಕವರಿಂದಲೇ ಪರಿಸರದ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿ ಮಕ್ಕಳ ಪೋಷಕರಿಂದ ಕುಂಡವೊಂದನ್ನು ಪಡೆದು ಆ ಕುಂಡದಲ್ಲಿ ಗಿಡನೆಟ್ಟು ಅದಕ್ಕೆ ನೀರುಣಿಸುವ, ಬೆಳೆಸುವ ಅರಿವನ್ನು ಮೂಡಿಸಿದರು. ಮಕ್ಕಳು ಪ್ರತಿ ದಿನವೂ ತಮ್ಮ ಕುಂಡದಲ್ಲಿ ಬೆಳೆಯುತ್ತಿರುವ ಗಿಡವನ್ನು ನೋಡಿ ಸಂತೋಷ ಪಡುವುದಲ್ಲದೆ, ಅವುಗಳಿಗೆ ಅದರತ್ತ ಆಸಕ್ತಿಯೂ ಬರುವಂತಾಗಿದೆ. ಅಂಗನವಾಡಿ ಕೇಂದ್ರದ ಸುತ್ತಲೂ ಖಾಲಿ ಜಾಗವಿದ್ದರೆ ಅಲ್ಲಿ ಕೈತೋಟವನ್ನು ನಿರ್ಮಿಸುವ ಕಾರ್ಯವನ್ನು ಮಾಡಿದ್ದಾರೆ. ನಿರುಪಯುಕ್ತ ಡಬ್ಬಗಳನ್ನು ಎಸೆಯದೆ ಅದರಲ್ಲಿ ಸಣ್ಣಪುಟ್ಟ ಹೂಗಿಡಗಳನ್ನು ನೆಟ್ಟು ಅಂಗನವಾಡಿಗಳಿಗೆ ಶೋಭೆ ತರುವಂತೆ ಮಾಡಿದ್ದಾರೆ. ಎಲ್ಲ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇವರ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಸದ್ಯ ತಮ್ಮ ಕಾರ್ಯ ವ್ಯಾಪ್ತಿಯ 35 ಅಂಗನವಾಡಿಗಳಲ್ಲಿ ಸಮವಸ್ತ್ರ, 25 ಕಡೆ ತರಕಾರಿ ಕೈತೋಟ, 12 ಕಡೆ ಗೋಡೆ ಬರಹ, 25 ಕಡೆ ಹೂ ಕುಂಡ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಆಸಕ್ತಿ ಮೂಡಿಸಿ ಪ್ರತಿಭೆಯ ಅನಾವರಣಕ್ಕೂ ಕಾರಣರಾಗಿದ್ದಾರೆ. ಅಂಗನವಾಡಿ ಮಕ್ಕಳನ್ನು ಒಂದೆಡೆ ಸೇರಿಸಿ ಸಾಮೂಹಿಕ ಮಕ್ಕಳ ದಿನಾಚರಣೆ ಆಚರಿಸುವ ಮೂಲಕ ಅವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ, ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ.
ಇಂತಹ ಅಧಿಕಾರಿಗಳು ಎಲ್ಲೆಡೆ ಇದ್ದರೆ ಖಂಡಿತಾ ಖಾಸಗಿ ನರ್ಸರಿ ಶಾಲೆಗಳಿಗೆ ಸೆಡ್ಡು ಹೊಡೆದು ನಮ್ಮ ಅಂಗನವಾಡಿಗಳು ಅಭಿವೃದ್ಧಿ ಹಾದಿಯಲ್ಲಿ ಸಾಗುವುದರಲ್ಲಿ ಸಂಶಯವಿಲ್ಲ.