ಮೈಸೂರು: ಹೂ ಮಾರುವ ಮಹಿಳೆ ಖಾತೆಗೆ 5 ಕೋಟಿ 81 ಲಕ್ಷ ಜಮೆಯಾಗಿದೆ ಅಂದರೆ ಅಚ್ಚರಿಯಾಗಬಹುದಲ್ಲವೆ? ಅಷ್ಟೇ ಅಲ್ಲ ಐನೂರು ಮತ್ತು ಸಾವಿರದ ನೋಟುಗಳ ಅಮಾನ್ಯದ ಬಳಿಕ ಜನಧನ್ ಖಾತೆಗಳು ದುರುಪಯೋಗವಾಗುತ್ತಿರುವ ಹಿನ್ನಲೆಯಲ್ಲಿ ಬಂದಿದ್ದರೂ ಬಂದಿರಬಹುದು ಎಂದು ಯೋಚಿಸಲೂಬಹುದು. ಆದರೆ ತನ್ನ ಖಾತೆಗೆ ಇಷ್ಟೊಂದು ಹಣ ಜಮಾ ಆಗಿರುವುದನ್ನು ನೋಡಿ ಮಹಿಳೆ ದಂಗಾಗಿ ಹೋಗಿದ್ದಂತು ನಿಜ.
ಇದೆಲ್ಲ ಹೇಗಾಯಿತು ಎಂಬ ಕುತೂಹಲವಿದ್ದರೆ ಆ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. ಇಷ್ಟಕ್ಕೂ ಈ ಘಟನೆ ನಡೆದಿರುವುದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ. ಹೂ ಮಾರುತ್ತಾ ಬದುಕು ಕಟ್ಟಿಕೊಂಡಿದ್ದ ಅಲ್ಲಿನ ನಿವಾಸಿ ನಾಗರಾಜು ಎಂಬುವರ ಪತ್ನಿ ನೀಲಾ ಕೋಟ್ಯಂತರ ಹಣ ಜಮಾ ಆಗಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಹಾಗೆ ನೋಡಿದರೆ ಹುಲ್ಲಹಳ್ಳಿಯ ನಿವಾಸಿ ನಾಗರಾಜು ಪತ್ನಿ ನೀಲಾ ಜೀವನೋಪಾಯಕ್ಕಾಗಿ ಹೂ ಮಾರಾಟದ ವೃತ್ತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹುಲ್ಲಹಳ್ಳಿಯ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಜನಧನ್ ಖಾತೆಯನ್ನು ತೆರೆದು ತಾವು ಸಂಪಾದಿಸಿದರಲ್ಲಿ ಅಷ್ಟೋ ಇಷ್ಟೋ ಜಮಾ ಮಾಡಿದ್ದರು.
ಈ ನಡುವೆ ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಸಿಕ್ಕರೆ ಬದುಕಿಗೆ ಯಾವುದಾದರೊಂದು ರೀತಿಯಲ್ಲಿ ಆಸರೆಯಾಗಬಹುದೆಂಬ ಉದ್ದೇಶದಿಂದ ಬ್ಯಾಂಕ್ ಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭ ಅವರ ಪಾಸ್ ಬುಕ್ ನ್ನು ಪಡೆದ ಸಿಬ್ಬಂದಿ ಪರಿಶೀಲನೆ ಮಾಡಿ ಜಮಾವಾಗಿರುವ ಹಣವನ್ನು ನಮೂದಿಸಿಕೊಟ್ಟಿದ್ದಾರೆ. ಅದರಂತೆ ಅವರ ಖಾತೆಗೆ ಒಟ್ಟು 5 ಕೋಟಿ 81 ಲಕ್ಷ ಹಣ ಜಮೆಯಾಗಿರುವುದು ಕಂಡು ಬಂದಿದೆ. ಇದನ್ನು ಕಂಡ ನೀಲಾ ಅವರು ಬೆಚ್ಚಿ ಬಿದ್ದಿದ್ದಾರೆ.
ಈ ವಿಚಾರ ಎಲ್ಲೆಡೆ ಹರಡಿ ಜನ ತಮ್ಮದೇ ಕತೆ ಕಟ್ಟಿ ಮಾತನಾಡ ತೊಡಗಿದ್ದಾರೆ. ಕೆಲವರು ಯಾರೋ ಕಪ್ಪು ಹಣವನ್ನು ಖಾತೆಗೆ ಹಾಕಿರಬೇಕೆಂದು ಹೆದರಿಸಿದ್ದಾರೆ. ಜನರ ಮಾತು ಕೇಳಿ ಭಯಗೊಂಡ ಮಹಿಳೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಪಾಸ್ ಪುಸ್ತಕದಲ್ಲಿ ನಮೂದು ಮಾಡುವಾಗ ತಾಂತ್ರಿಕ ತೊಂದರೆಯಿಂದ ತಪ್ಪಾಗಿ ಅಂಕಿಗಳು ಮುದ್ರಿತವಾಗಿವೆ ಎಂಬ ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಸ್ಪಷ್ಟನೆ ನೀಡಿದ ಬಳಿಕ ನೀಲಾ ನೆಮ್ಮದಿಯುಸಿರು ಬಿಟ್ಟಿದ್ದಾರೆ. 500, 1000 ನೋಟುಗಳು ಅಮಾನ್ಯವಾದ ಬಳಿಕ ಹಣವೇ ಇಲ್ಲದಿದ್ದ ಬಹಳಷ್ಟು ಜನಧನ್ ಖಾತೆಗಳಲ್ಲಿ ಹಣ ಸಾವಿರಾರು ರೂಪಾಯಿ ಜಮಾವಾಗಿದೆ. ಹೀಗಾಗಿ ನೀಲಾ ಅವರ ಖಾತೆಯಲ್ಲಿ ತಾಂತ್ರಿಕ ದೋಷದಿಂದ ತಪ್ಪಾಗಿ ಮುದ್ರಣವಾಗಿದ್ದ ಅಂಕಿ ಸುದ್ದಿಗೆ ಗ್ರಾಸವಾಗಿದೆ.