ಮಂಡ್ಯ: ಈ ಬಾರಿ ಕೆ.ಆರ್.ಎಸ್ ನಿಂದ ನೀರು ಬಾರದ ಕಾರಣ ಭತ್ತದ ಬೆಳೆ ಬೆಳೆಯಲಾಗದೆ ಸಂಕಷ್ಟದಲ್ಲಿರುವ ರೈತರು ಸಂಕ್ರಾಂತಿಯತ್ತ ಹೆಚ್ಚಾಗಿ ಆಸಕ್ತಿ ತೋರಿದಂತೆ ಕಂಡು ಬರುತ್ತಿಲ್ಲ. ಆದರೂ ಮದ್ದೂರಿನ ರೈತ ಯಶವಂತ್ ಎಂಬುವರು ತಾತ ಮುತ್ತಾಂದಿರ ಕಾಲದಿಂದಲೂ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಗದ್ದೆಗೆ ನೀರಿಲ್ಲದಿದ್ದರೂ ಟ್ಯಾಂಕರ್ ಮೂಲಕ ನೀರು ಹಾಯಿಸಿ ಭತ್ತ ಬೆಳೆದು ಸಂಕ್ರಾಂತಿ ಆಚರಿಸಿದ್ದಾರೆ.
ಇದೊಂದು ರೀತಿಯಲ್ಲಿ ಅಚ್ಚರಿ ಎನಿಸಿದರೂ ಸತ್ಯ. ಈ ಬಾರಿ ಬಹಳಷ್ಟು ರೈತರ ಭತ್ತದ ಗದ್ದೆ ಮಳೆಯಿಲ್ಲದೆ, ಕೆಆರ್ ಎಸ್ ನಿಂದ ನೀರು ಬಾರದ ಒಣಗಿ ನಿಂತಿದೆ. ಅಲ್ಲಿ ಭತ್ತ ಬೆಳೆಯುವುದು ಇರಲಿ ಹುಲ್ಲು ಕೂಡ ಹುಟ್ಟುತ್ತಿಲ್ಲ. ಇಂಥ ಸಂದರ್ಭ ಎಷ್ಟೇ ಕಷ್ಟವಾಗಲೀ, ಸಾಲವಾದರೂ ಪರ್ವಾಗಿಲ್ಲ ಭತ್ತ ಬೆಳೆದು ತೀರಲೇ ಬೇಕೆಂದು ಪಣ ತೊಟ್ಟ ಯಶವಂತ್ ಅವರು ಬೇರೆಡೆಯಿಂದ ಟ್ಯಾಂಕರ್ ನಲ್ಲಿ ನೀರು ತಂದು ಗದ್ದೆಗೆ ಹಾಯಿಸಿ ಭತ್ತ ಬೆಳೆದು ಸಂಕ್ರಾಂತಿಯನ್ನು ಸಂಪ್ರದಾಯಬದ್ಧವಾಗಿಯೇ ಆಚರಿಸಿದ್ದು ವಿಶೇಷವಾಗಿದೆ.
ರೈತ ಯಶವಂತ್ ಹಾಗೂ ಕುಟುಂಬದವರು ತಾವು ಬೆಳೆದ ಭತ್ತವನ್ನು ರಾಶಿ ಮಾಡಿ ಅದನ್ನು ಮಾವು, ಕಬ್ಬಿನ ಜಲ್ಲೆ, ಬಾಳೆ ಹಾಗೂ ಹೂವಿನಿಂದ ಸಿಂಗರಿಸಿ ಸುತ್ತ ರಂಗೋಲಿ ಬಿಡಿಸಿ ಕೊಳಗ, ಸೇರಿನಲ್ಲಿ ಭತ್ತ ತುಂಬಿ ಪೂಜೆ ಸಲ್ಲಿಸಿ, ದೃಷ್ಟಿ ಆಗದ ಹಾಗೆ ರಾಶಿಗೆ ಕುಡುಗೋಲನ್ನು ಇಟ್ಟು ಸುತ್ತ ಬೂದಿಯನ್ನು ಎರಚಿ ಹಿಂದಿನ ಕಾಲದಿಂದ ನಡೆದು ಬಂದ ಸಂಪ್ರದಾಯವನ್ನು ಮುಂದುವರೆಸಿದರು. ಈ ವೇಳೆ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಕೋಲಾಟವಾಡಿದರೆ, ತಮ್ಮೊಂದಿಗೆ ಹೆಗಲುಕೊಟ್ಟು ದುಡಿದ ಎತ್ತುಗಳನ್ನು ಸಿಂಗಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಹಾಗೆ ನೋಡಿದರೆ ಇದೇ ರೀತಿ ಸಂಪ್ರದಾಯಬದ್ಧವಾಗಿ ಸಂಕ್ರಾಂತಿ ಆಚರಣೆ ಮಾಡುವುದು ಯಶವಂತ್ ಅವರ ಕುಟುಂಬದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಅವರ ತಾತ ಮುತ್ತಾತರು ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮುನ್ನಾ ದಿನ ತನಿಯೆರೆದು, ಮುನಿ ಮಾಡಿ ನಂತರ ಭತ್ತ ಬಡಿದು ರಾಶಿ ಪೂಜೆ ಮಾಡುವುದರೊಂದಿಗೆ ನೆರೆದ ನೂರಾರು ಮಂದಿಗೆ ಅನ್ನಬಡಿಸುತ್ತಿದ್ದರಂತೆ. ಇದನ್ನು ಇಂದಿಗೂ ಎಷ್ಟೇ ಕಷ್ಟವಾದರೂ ನಿಲ್ಲಿಸದೆ ಯಶವಂತ್ ಮತ್ತು ಕುಟುಂಬ ಮುಂದುವರೆಸಿಕೊಂಡು ಹೋಗುತ್ತಿದೆ. ಒಂದು ವರ್ಷ ಕಷ್ಟವಾದರೂ ನಂಬಿದ ಭೂತಾಯಿ ನಮ್ಮನ್ನು ಕೈಬಿಡಲ್ಲ ಎಂಬ ನಂಬಿಕೆ ಅವರದ್ದಾಗಿದೆ.