ಮೂಡಿಗೆರೆ: ರೋಗಿಗಳು ಪರದಾಡುವಂತಾಗಿರುವ ಮೂಡಿಗೆರೆ ಪಟ್ಟಣದ ಸರಕಾರಿ ಸಾರ್ವಜನಿಕ ಎಂಜಿಎಂ ಆಸ್ಪತ್ರೆಗೆ ಕೂಡಲೇ ವೈಧ್ಯರುಗಳನ್ನು ತಕ್ಷಣ ನೇಮಿಸುವಂತೆ ಒತ್ತಾಯಿಸಿ ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಕಾರ್ಯಕರ್ತರು ಎಂಜಿಎಂ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಅಲ್ತಾಫ್ ಬಿಳಗುಳ ಮಾತನಾಡಿ, ಹದಿನೇಳು ವೈಧ್ಯರು ಇರಬೇಕಾದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಏಳು ಮಂದಿ ಮಾತ್ರ ವೈದ್ಯರಿದ್ದಾರೆ. ಅದರಲ್ಲೂ ಕೆಲವು ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಬಾಗಿಲ ಎದುರು ಕಾಯುವಂತೆ ಮಾಡುತ್ತಿದ್ದಾರೆ. ಇಲ್ಲವೇ ಸಣ್ಣಪುಟ್ಟ ರೋಗಿಗಳು ಖಾಸಗಿ ಕ್ಲಿನಿಕ್ನತ್ತ ತೆರಳುವಂತಾಗಿದೆ. ಕೆಲವು ಸಲ ಶೀತ, ಜ್ವರ, ತಲೆನೋವಿಗೂ ಮಂಗಳೂರು ಆಸ್ಪತ್ರೆಗೆ ಹೋಗಬೇಕಾದ ದುಸ್ಥಿತಿ ಇಲ್ಲಿನದ್ದಾಗಿದೆ ಎಂದು ಆರೋಪಿಸಿದರು.
ಅಪಘಾತಗಳು ನಡೆದಾಗ ತುರ್ತು ಚಿಕಿತ್ಸೆ ಮಾತ್ರ ಇಲ್ಲಿ ಲಭ್ಯವಾಗುತ್ತಿದೆ. ಗ್ರಾಮೀಣ ಭಾಗದಿಂದ ಗಂಟೆಗಟ್ಟಲೆ ಕ್ರಮಿಸಿ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಲಭ್ಯವಾಗದಿರುವುದು ದುರಂತವೇ ಸರಿ. 100 ಹಾಸಿಗೆಗಳಿದ್ದು ಮೇಲ್ದರ್ಜೆಗೇರಿಸಲಾಗಿದ್ದರೂ ಯಾವುದೇ ಪ್ರಯೋಜನವೂ ರೋಗಿಗಳಿಗೆ ದೊರಕುತ್ತಿಲ್ಲ. ತಾಲೂಕಿನ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಸರಿಯಾದ ಚಿಕಿತ್ಸೆ ದೊರಕದೇ ಹೈರಾಣುಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದು.
ಇಲ್ಲಿನ ಪರಿಸ್ಥಿತಿಯನ್ನು ಮನಗಂಡು ಈಗಾಗಲೇ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಅನುಕೂಲವೂ ದೊರೆತಿಲ್ಲ. ಇನ್ನದರೂ ಇಲ್ಲಿಗೆ ಬೇಕಾದ ವೈಧ್ಯರು, ಸಿಬ್ಬಂಧಿಗಳನ್ನು ನೇಮಕಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ತರಹದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.