ಕೆ.ಆರ್.ನಗರ: ದಕ್ಷಿಣ ಭಾರತದಲ್ಲಿಯೇ ಹೆಸರು ವಾಸಿಯಾಗಿರುವ ಕೆ.ಆರ್.ನಗರ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಶ್ರೀರಾಮದೇವರ ಬ್ರಹ್ಮ ರಥೋತ್ಸವ ಭಾರಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಭಾನುವಾರ ನಡೆಯಿತು.
ಬೆಳಿಗ್ಗೆ 10.30ರ ಸಮಯದಲ್ಲಿ ಸಲ್ಲುವ ಶುಭಮೀನ ಲಗ್ನದಲ್ಲಿ ವಿವಿಧ ಮಠಗಳ ಮಠಾಧೀಶರ ಉಪಸ್ಥಿತಿಯಲ್ಲಿ ಶೃಂಗಾರಗೊಂಡಿದ್ದ ರಥೋತ್ಸವಕ್ಕೆ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಆ ನಂತರ ರಥವನ್ನು ಸಾವಿರಾರು ಭಕ್ತರ ಹರ್ಷೋದ್ಘಾರದೊಂದಿಗೆ ಶ್ರೀರಾಮ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿಸಿ ಸ್ವಸ್ಥಾನಕ್ಕೆ ತರಲಾಯಿತು. ಈ ಸಂದರ್ಭ ನವ ದಂಪತಿಗಳು ಮತ್ತು ಭಕ್ತಾಧಿಗಳು ಶ್ರೀರಾಮನಿಗೆ ಜಯಕಾರವನ್ನು ಕೂಗಿ ಹಣ್ಣು ಜವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು.
ಸುಗ್ಗಿಯ ನಂತರ ನಡೆಯುವ ಮೊದಲ ಜಾತ್ರಾ ಮಹೋತ್ಸವ ಆಗಿದ್ದರಿಂದ ಜಿಲ್ಲೆಯಿಂದಲ್ಲದೆ ಮಂಡ್ಯ, ಹಾಸನ, ಕೊಡಗು, ಬೆಂಗಳೂರು, ತುಮಕೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು ಇನ್ನಿತರ ಸೇರಿದಂತೆ ಜಿಲ್ಲೆಗಳಿಂದಲೂ ಕಳೆದ ಬಾರಿಗಿಂತಲೂ ಹೆಚ್ಚಿನ ಭಕ್ತಾಧಿಗಳು ಆಗಮಿಸಿದ್ದರು.
ಭಕ್ತಾಧಿಗಳಲ್ಲದೆ ನೂತನ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಹುತೇಕ ಭಕ್ತರು ಮುಂಜಾನೆಯಿಂದಲೇ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನಂತರ ಸರತಿ ಸಾಲಲ್ಲಿ ನಿಂತು ದೇವಾಲಯದಲ್ಲಿ ನಡೆದ ವಿಶೇಷ ಪೂಜಾ-ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀ ರಾಮನ ದರ್ಶನ ಪಡೆದರು.
ರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೂ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಸಾ.ರಾ ಮಹೇಶ್ ಅವರು ಅನ್ನಸಂತರ್ಪಣೆ ಏರ್ಪಡಿಸಿದ್ದರು.