ಮಡಿಕೇರಿ: ನಗರಸಭೆಯ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಆಡಳಿತಾ ರೂಢ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಬಿಜೆಪಿ ಏಳು ಸ್ಥಾನಗಳನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ನ ಕೆಲವು ಸದಸ್ಯರು ಬಿಜೆಪಿ ಪಾಳಯಕ್ಕೆ ಮತದಾನ ಮಾಡಿದ ಕಾರಣ ಕೇವಲ ಮೂರು ಸ್ಥಾನಗಳನ್ನಷ್ಟೇ ಪಡೆಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಕಾಂಗ್ರೆಸ್ ಬೆಂಬಲಿತ ಎಸ್ಡಿಪಿಐ ಒಂದು ಸ್ಥಾನ ಗಳಿಸಿದೆ.
ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಒಟ್ಟು 11 ಸ್ಥಾನಗಳ ಹಂಚಿಕೆಯಲ್ಲಿ ಒಮ್ಮತ ಮೂಡದ ಕಾರಣ ಅನಿವಾರ್ಯವಾಗಿ ಗುಪ್ತ ಮತದಾನ ಪ್ರಕ್ರಿಯೆ ನಡೆಸಬೇಕಾಯಿತು. ಕಾಂಗ್ರೆಸ್ ನಿಂದ ಚುಮ್ಮಿ ದೇವಯ್ಯ, ಕೆ.ಎಂ.ಗಣೇಶ್, ಜುಲೆಕಾಬಿ, ಹೆಚ್.ಎಂ.ನಂದಕುಮಾರ್, ಎ.ಎಸ್.ಪ್ರಕಾಶ್ ಆಚಾರ್ಯ, ಲೀಲಾಶೇಷಮ್ಮ, ತಜಸುಂ ಹಾಗೂ ಕಾಂಗ್ರೆಸ್ ಬೆಂಬಲಿತ ಎಸ್ಡಿಪಿಐ ನ ಸದಸ್ಯರಾದ ಅಮಿನ್ ಮೊಹಿಸಿನ್, ಮನ್ಸೂರ್, ಕೆ.ಜಿ.ಪೀಟರ್, ನೀಮಾ ಅರ್ಶದ್ ಹೀಗೆ ಒಟ್ಟು 11 ಮಂದಿ ಕಣದಲ್ಲಿದ್ದರು.
ಬಿಜೆಪಿಯಿಂದ ಅನಿತಾ ಪೂವಯ್ಯ, ಲಕ್ಷ್ಮೀ, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಸವಿತಾ ರಾಕೇಶ್, ಶಿವಕುಮಾರಿ ಹಾಗೂ ಪಿ.ಟಿ.ಉಣ್ಣಿಕೃಷ್ಣ ಸ್ಪರ್ಧೆಯಲ್ಲಿದ್ದರು. ಹೀಗೆ ಒಟ್ಟು 18 ಮಂದಿ ಚುನಾವಣೆಯನ್ನು ಎದುರಿಸಿದರು. ಗುಪ್ತ ಮತದಾನದಲ್ಲಿ ಚುಮ್ಮಿ ದೇವಯ್ಯ 13, ಕೆ.ಎಂ.ಗಣೇಶ್ 13, ಜುಲೆಕಾಬಿ 13, ಹೆಚ್.ಎಂ.ನಂದಕುಮಾರ್ 12, ಎ.ಎಸ್.ಪ್ರಕಾಶ್ ಆಚಾರ್ಯ 12, ಲೀಲಾಶೇಷಮ್ಮ 12, ತಜಸುಂ 11, ಎಸ್ಡಿಪಿಐ ನ ಅಮಿನ್ ಮೊಹಿಸಿನ್ 11, ಮನ್ಸೂರ್ 13, ಕೆ.ಜಿ.ಪೀಟರ್ 14, ಹಾಗೂ ನೀಮಾ ಅರ್ಶದ್ 13 ಮತಗಳನ್ನು ಪಡೆದರು. ಬಿಜೆಪಿಯ ಅನಿತಾ ಪೂವಯ್ಯ ಅತ್ಯಧಿಕ 16, ಲಕ್ಷ್ಮೀ 13, ಪಿ.ಡಿ.ಪೊನ್ನಪ್ಪ 14, ಕೆ.ಎಸ್.ರಮೇಶ್ 14, ಸವಿತಾ ರಾಕೇಶ್ 13, ಶಿವಕುಮಾರಿ 14 ಹಾಗೂ ಪಿ.ಟಿ.ಉಣ್ಣಿಕೃಷ್ಣನ್ 14 ಮತಗಳನ್ನು ಪಡೆದರು.
ಅಧಿಕ ಮತಗಳಿಸಿದ ಆಧಾರದಲ್ಲಿ ಬಿಜೆಪಿಯ ಅನಿತಾ ಪೂವಯ್ಯ, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಶಿವಕುಮಾರಿ, ಪಿ.ಟಿ.ಉಣ್ಣಿಕೃಷ್ಣ ಹಾಗೂ ಕೆ.ಜಿ.ಪೀಟರ್ ಸೇರಿದಂತೆ ಆರು ಮಂದಿ ಸ್ಥಾಯಿ ಸಮಿತಿಗೆ ಆಯ್ಕೆಯಾದರು. ಮತ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಏಳು ಮಂದಿ ತಲಾ 13 ಮತಗಳನ್ನು ಪಡೆದ ಕಾರಣ ಉಳಿದ ಐದು ಮಂದಿಯ ಆಯ್ಕೆಗಾಗಿ ಲಾಟರಿ ಮೊರೆ ಹೋಗಬೇಕಾಯಿತು. ಬಿಜೆಪಿಯ ಲಕ್ಷ್ಮೀ, ಸವಿತಾ ರಾಕೇಶ್, ಕಾಂಗ್ರೆಸ್ ನ ಕೆ.ಎಂ.ಗಣೇಶ್, ಜುಲೇಕಾಬಿ ಹಾಗೂ ಚುಮ್ಮಿದೇವಯ್ಯ ಲಾಟರಿ ಮೂಲಕ ಆಯ್ಕೆಯಾದರು. ಇಲ್ಲೂ ಅದೃಷ್ಟ ಬಿಜೆಪಿ ಪರವಾಗಿದ್ದ ಕಾರಣ ಬಿಜೆಪಿ ಒಟ್ಟು 7 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಕಾಂಗ್ರೆಸ್ ಕೇವಲ 3 ಸ್ಥಾನಗಳಿಗೆ ಹಾಗೂ ಎಸ್ಡಿಪಿಐ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಪೌರಾಯುಕ್ತರಾದ ಬಿ.ಶುಭ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಚುನಾವಣೆಯಲ್ಲಿ ಒಟ್ಟು 11 ಸದಸ್ಯ ಸ್ಥಾನಗಳಿಗಾಗಿ ಸ್ಪರ್ಧಿಸಿದ್ದ 18 ಮಂದಿಗೆ 27 ಮಂದಿ ಮತದಾನ ಮಾಡಬೇಕಾಗಿತ್ತಾದರೂ ಕಾಂಗ್ರೆಸ್ ಸದಸ್ಯೆ ವೀಣಾಕ್ಷಿ ಹಾಗೂ ಜೆಡಿಎಸ್ ಸದಸ್ಯೆ ಸಂಗೀತಾ ಪ್ರಸನ್ನ ಗೈರು ಹಾಜರಾದ ಕಾರಣ 25 ಮಂದಿ ಮತದಾನ ಮಾಡಿದರು.
ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಹಾಗೂ ವೀಣಾಅಚ್ಚಯ್ಯ ಮತದಾನದಲ್ಲಿ ಪಾಲ್ಗೊಂಡು ಫಲಿತಾಂಶದ ಕುತೂಹಲಕ್ಕೆ ಕಾರಣಕರ್ತರಾದರು. ನಗರಸಭಾ ಅಧ್ಯಕ್ಷರ ಆಯ್ಕೆ ಸಂದರ್ಭ ಗೈರು ಹಾಜರಾಗಿ ಬಿಜೆಪಿ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಹಾಜರಿದ್ದು ಗಮನ ಸೆಳೆದರು.
ಸಭೆಯ ಆರಂಭದಲ್ಲಿ ಮಾತನಾಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸ್ಥಾಯಿ ಸಮಿತಿಯ 11 ಸ್ಥಾನಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಗೆ 6, ಬಿಜೆಪಿಗೆ 3 ಹಾಗೂ ಎಸ್ಡಿಪಿಐ ಗೆ 2 ಸ್ಥಾನಗಳನ್ನು ನೀಡುವುದಾಗಿ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಬಿಜೆಪಿ ಹಾಗೂ ಎಸ್ಡಿಪಿಐ ಸದಸ್ಯರು ಹೆಚ್ಚಿನ ಸ್ಥಾನಗಳನ್ನು ನೀಡಬೇಕೆಂದು ಒತ್ತಾಯಿಸಿದ ಕಾರಣ ಅನಿವಾರ್ಯವಾಗಿ ಚುನಾವಣೆಯನ್ನು ನಡೆಸಬೇಕಾಯಿತು. ಉಪಾಧ್ಯಕ್ಷರಾದ ಕೆ.ಎಸ್.ಪ್ರಕಾಶ್ ಉಪಸ್ಥಿತರಿದ್ದರು.