ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯ ಮಾಜಿ ಸೈನಿಕರ ಸಂಕಷ್ಟಗಳಿಗೆ ಕಳೆದ ಎರಡು ದಶಕಗಳಿಂದ ಆಡಳಿತ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ನಿರ್ಲಕ್ಷ್ಯವನ್ನು ಖಂಡಿಸಿ ಜ.20 ರಂದು ನಗರದಲ್ಲಿ ‘ಮೌನ ಮೆರವಣಿಗೆ’ ನಡೆಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ(ನಿವೃತ್ತ) ಜ.20 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಬಳಿ ಜಿಲ್ಲೆಯ ಮಾಜಿ ಯೋಧರು ಸಮಾವೇಶಗೊಂಡು, ಗಾಂಧಿ ಮೈದಾನದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್ ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ ಅವರುಗಳು, ಅಮ್ಮತ್ತಿಯ ನಿವೃತ್ತ ಯೋಧರ ಅಧೀನದಲ್ಲಿರುವ ಕೃಷಿ ಜಾಗ ತೆರವಿನ ಪ್ರಕರಣವನ್ನು ಸುಖಾಂತ್ಯಗೊಳಿಸುವುದಾಗಿ ಭರವಸೆ ನೀಡಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದರು. ಭರವಸೆಗೆ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದ ಅವರು ಕಳೆೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಜಿ ಸೈನಿಕರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಲೇಬೇಕಾಗಿದೆ ಎಂದರು. ರೈತರ ಒಕ್ಕೂಟ, ಅರೆ ಸೇನಾಪಡೆಗಳ ಸಂಘಟನೆ, ಮಾನವ ಹಕ್ಕುಗಳ ಸಂಘಟನೆ, ಅಮ್ಮತ್ತಿ ಕೊಡವ ಸಮಾಜ ಸೇರಿದಮತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲವನ್ನು ನೀಡಿರುವುದಾಗಿ ಮೇ.ಜ.ಬಿ.ಎ. ಕಾರ್ಯಪ್ಪ ತಿಳಿಸಿದರು.
ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದವರಿಗೆ 1971ನೇ ಇಸವಿಯವರೆಗೆ 10 ಏಕರೆಯಷ್ಟು ಜಾಗವನ್ನು ಮಂಜೂರು ಮಾಡಿಕೊಡಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಮಾಜಿ ಸೈನಿಕರು ಗುರುತಿಸಿದ ಜಾಗ ಮಂಜೂರಾತಿ ಮಾಡುವ ಬದಲು ಅದು ಅರಣ್ಯ ಇಲಾಖೆಯ ಜಾಗ, ಗೋಮಾಳ ಎಂದೆಲ್ಲ ಕಾರಣಗಳನ್ನು ನೀಡುತ್ತಾ ಬರಲಾಗುತ್ತಿದೆ ಎಂದು ಬೆೇಸರ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಗಳಿಗೆ ಸುಲಭವಾಗಿ ಜಾಗವನ್ನು ಮಂಜೂರು ಮಾಡಿ ಕೊಡಲಾಗುತ್ತಿದೆ. ಮಾಜಿ ಸೈನಿಕರ ಸಂಘದಿಂದ ಜಿಲ್ಲಾಡಳಿತಕ್ಕೆ ಜಾಗ ಮಂಜೂರಾತಿಗೆ ನೀಡಿರುವ ಸುಮಾರು 200 ಕಡತಗಳು ಧೂಳು ತಿನ್ನುತ್ತಾ ಬಿದ್ದಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿರುವ ಬೃಹತ್ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಮಾಡಿಕೊಂಡಿರುವ ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಅದನ್ನು ಜಿಲ್ಲೆಯ ಮಾಜಿ ಯೋಧರಿಗೆ, ಕ್ರೀಡಾ ಸಾಧಕರಿಗೆ, ಅರೆ ಸೇನಾ ಪಡೆಯ ನಿವೃತ್ತ ಯೊಧರಿಗೆ ಹಂಚಬೇಕೆಂದು ಮೇ.ಜ.ಬಿ.ಎ. ಕಾರ್ಯಪ್ಪ ಒತ್ತಾಯಿಸಿದರು.
ಮಾಜಿ ಸೈನಿಕರ ಆರೋಗ್ಯ ಸಂರಕ್ಷಣೆೆಗೆ ಪೂರಕವಾಗಿ ಮಡಿಕೆೇರಿಯಲ್ಲಿ 2002 ರಲ್ಲಿ ಆರಂಭಗೊಂಡಿರುವ ಇಸಿಹೆಚ್ಎಸ್ ಪಾಲಿ ಕ್ಲಿನಿಕ್ ಗೆ 20 ಸೆಂಟ್ ಜಾಗ ನೀಡಬೇಕು ಹಾಗೂ ವೀರಾಜಪೇಟೆಯ ಇಸಿಹೆಚ್ಎಸ್ ಗೆ ಜಾಗ ಒದಗಿಸುವಂತೆ ಸಂಘದ ಮೂಲಕ ಮಾಡಿಕೊಂಡಿರುವ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಮಾಜಿ ಸೈನಿಕರ ಸಂಘದ ಕಛೇರಿಗೆ ಜಾಗ ಒದಗಿಸುವಂತೆ ಮಾಡಿಕೊಂಡ ಬೇಡಿಕೆಯೂ ಈಡೇರಿಲ್ಲ. ನಗರದ ಮಾಜಿ ಸೈನಿಕರ ಕಲ್ಯಾಣ ಮಂಡಳಿಗೆ ಸೇರಿದ್ದ ಕಟ್ಟಡದಲ್ಲಿನ ಬ್ಯಾಂಕ್ ಸ್ಥಳಾಂತರಗೊಂಡು ಅಲ್ಲಿ ಅಗತ್ಯ ಸ್ಥಳಾವಕಾಶವಿದ್ದರೂ ಸಂಘದ ಕಛೇರಿಗೆ ಜಾಗ ಒದಗಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ನಗರ ಪ್ರದೇಶದಲ್ಲಿರುವ ಮಾಜಿ ಸೈನಿಕರಿಗೆ ಇರುವ ಮನೆ ಕಂದಾಯದಲ್ಲಿನ ಶೇ.50ರ ವಿನಾಯಿತಿಯನ್ನು ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಮಾಜಿ ಸೈನಿಕರಿಗೂ ವಿಸ್ತರಿಸಬೇಕು, ಶೂಟಿಂಗ್ ನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಮಾಜಿ ಸೈನ್ಯಾಧಿಕಾರಿ ಕ್ಯಾಪ್ಟನ್ ಸುಬ್ಬಯ್ಯ ಮತ್ತು ಕೃಷಿಯಲ್ಲಿ ಸಾಧನೆ ಮಾಡಿರುವ ಮಾಜಿ ಯೋಧ ತಿಮ್ಮಯ್ಯ ಅವರಿಗೆ ಸರ್ಕಾರ ರಾಜ್ಯ ಮಟ್ಟದ ಪ್ರಶಸ್ತಿಗೆ ಪರಿಗಣಿಸಬೇಕೆಂದು ಮೇ.ಜ.ಬಿ.ಎ. ಕಾರ್ಯಪ್ಪ ಒತ್ತಾಯಿಸಿದರು.
ಕೂಡಿಗೆಯಲ್ಲಿ ಸೈನಿಕ ಶಾಲೆ ಆರಂಭಗೊಂಡ ಈ ಹತ್ತು ವರ್ಷಗಳಲ್ಲಿ ಜಿಲ್ಲೆಯ ಕೇವಲ 20 ಮಂದಿಯಷ್ಟು ವಿದ್ಯಾರ್ಥಿಗಳು ಮಾತ್ರ ಇದರ ಸದುಪಯೋಗಪಡೆದಿದ್ದಾರೆ. ಉಳಿದಂತೆ ಇಲ್ಲಿನ ಸೈನಿಕ ಶಾಲೆಯ ಪ್ರಯೋಜನವನ್ನು ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದವರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೈನಿಕ ಶಾಲೆಯ ಪ್ರವೇಶಾತಿಯಲ್ಲಿ ಶೇ.10 ರಷ್ಟು ಸ್ಥಾನಗಳನ್ನು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೀಸಲಿಡಬೇಕೆಂದು ಅವರು ಆಗ್ರಹಿಸಿದರು.
ಯೋಧರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯ ಹೀನಾಯ ಸ್ಥಿತಿಯಲ್ಲಿದೆ. ಉತ್ತರ ಭಾರತದ ಹರಿಯಾಣದಲ್ಲಿ ಮಾಜಿ ಸೈನಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅಲ್ಲಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಶೇಕಡ ಒಂದರಷ್ಟು ಸೌಲಭ್ಯವನ್ನು ಒದಗಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಯೋಧರ ಸಂಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ 2018ರ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿರುವ ಸುಮಾರು 15 ರಿಂದ 20 ಸಾವಿರ ಮಾಜಿ ಯೋಧರು ಒಗ್ಗಟ್ಟಾಗಿ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಮೇ.ಜ.ಬಿ.ಎ. ಕಾರ್ಯಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಲೆಫ್ಟಿನೆಂಟ್ ಕರ್ನಲ್ ಐಯ್ಯುಡ ಗಣಪತಿ, ಮಾಜಿ ಸೈನಿಕರ ಸಂಘದ ಪೊನ್ನಂಪೇಟೆ ಘಟಕದ ಅಧ್ಯಕ್ಷ ಹವಾಲ್ದಾರ್ ಐ.ಕೆ. ಮಂದಣ್ಣ, ಜಿಲ್ಲಾ ಸಂಘದ ಮಾಜಿ ಉಪಾಧ್ಯಕ್ಷರಾದ ಕರ್ನಲ್ ಎನ್.ಎ. ಚಿಣ್ಣಪ್ಪ, ವೀರಾಜಪೇಟೆ ಘಟಕದ ಅಧ್ಯಕ್ಷ ಸುಬೇದಾರ್ ಸಿ.ಕೆ. ನಂಜಪ್ಪ ಹಾಗೂ ಜಿಲ್ಲಾ ಸಂಘದ ಸದಸ್ಯ ನಾಯಕ್ ಜೆ.ಎನ್. ಪದ್ಮನಾಭ ಉಪಸ್ಥಿತರಿದ್ದರು.