ಚಿಕ್ಕಮಗಳೂರು: ಡಾಕ್ಟರನ್ನ ವೈದ್ಯೋ ಹರಿ ನಾರಾಯಣ ಅಂತಾರೆ. ಅದೇ ವೈದ್ಯರನ್ನ ಯಮನ ಸಹೋದರ ಅಂತಲೂ ಕರೆಯುತ್ತಾರೆ. ಓರ್ವ ರೋಗಿಯ ಬಾಳಲ್ಲಿ ವೈದ್ಯರು ಯಾವ್ ರೀತಿ ಹೆಸರನ್ನ ಬೇಕಾದ್ರು ಗಳಿಸ್ಬೋದು. ಆದ್ರೆ, ಕಾಫಿನಾಡಲ್ಲಿ ಮೂರು ವರ್ಷದ ಮಗುವಿಗೆ ವೈದ್ಯರ ಟ್ರೀಟ್ಮೆಂಟ್ ಬಳಿಕ ಆ ಮಗು ತನ್ನ ಬಲಗಾಲಿನ ಸ್ವಾಧೀನವನ್ನೇ ಕಳೆದುಕೊಂಡಿದೆ.
ಜ್ವರ ಅಂತಾ ವೈದ್ಯರ ಬಳಿ ಹೋದ್ರೆ ಅವ್ರು ಲೈಫ್ ಟೈಂ ಮಗುವಿನ ಕಾಲನ್ನೆ ಕಿತ್ಕೊಂಡಿದ್ದಾರೆ. ಅವ್ರು ಆಯುರ್ವೇದಿಕ್ ಡಾಕ್ಟ್ರು, ಇಂಗ್ಲೀಷ್ ಮೆಡಿಸನ್ ನೀಡಿ ನಮ್ಮ ಮಗುವಿನ ಬದುಕನ್ನೇ ಕಿತ್ಕೊಂಡ್ರು ಅಂತಾ ಪೋಷಕರು ಆರೋಪಿಸಿದ್ದಾರೆ 3 ವರ್ಷದ ಈ ಮಗುವಿನ ಹೆಸರು ಸಮರ್ಥ್. ಚಿಕ್ಕಮಗಳೂರು ನಿವಾಸಿ. ಮೂಡಿಗೆರೆಯಲ್ಲಿದ್ದಾಗ ಜ್ವರ ಬಂತೆಂದು ಸಂಜೀವಿನಿ ಕ್ಲಿನಿಕ್ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯೆ ಜವೇರಿಯಾ ಶಾಹಿ ಈತನಿಗೆ ಕೊಟ್ಟ ಇಂಜಕ್ಷನ್ನಿಂದ ಈತ ತನ್ನ ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾನೆ.
ಮೂರು ತಿಂಗಳಿಂದ ಕಾಲಿನ ಬೆರಳು ಅಲ್ಲಾಡುತ್ತಿಲ್ಲ. ಮಗುವಿನ ಕಾಲಲ್ಲಿ ಒಂದಾದ ಮೇಲೊಂದು ಗಾಯವಾಗ್ತಿದೆ. ನಡೆಯುವಾಗ ಈ ಬಾಲಕ ತನ್ನ ಬಲಗಾಲನ್ನ ಎಳೆದುಕೊಂಡೇ ಹೋಗಬೇಕು. ತಿಂಗಳ ಕಾಲ ಮಗು ಅನ್ನ ತಿನ್ನದೆ ಹಾಲು, ಹಣ್ಣು ತಿನ್ಕೊಂಡೇ ಇತ್ತು. ಕೂಡಲೇ ಮಗುವಿನ ಪೋಷಕರು ಮಗುವನ್ನ ಮಂಗಳೂರಿನ ಫಾದರ್ ಮುಲ್ಲರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ಗೂ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಇಂಜಕ್ಷನ್ ಕಾಲಿನ ಮುಖ್ಯವಾದ ನರಕ್ಕೆ ಹಾಕಿರೋದ್ರಿಂದ ಹೀಗಾಗಿದೆ, ಮುಂದೆ ಸರಿ ಹೋಗ್ಬೋದು, ಹೋಗ್ದಲೆ ಇರ್ಬೋದು ಅಂದ್ರಂತೆ. ತನ್ನ ಕುರುಳಬಳ್ಳಿಯ ಸ್ಥಿತಿ ಕಂಡು ಹೆತ್ತವರು ಚಿಂತಾಕ್ರಾಂತರಾಗಿದ್ದಾರೆ.ಮಗುವಿನ ಅಪ್ಪ ಡ್ರೈವರ್. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ರು. ಈಗ ಮಗು ತುಂಬಾ ಹಠ ಮಾಡುತ್ತೇಂದು ತಾಯಿ ಮನೆಯಲ್ಲೇ ಮಗುವನ್ನ ಸಂತೈಸ್ತಿದ್ದಾರೆ.
ನಿಧಾನವಾಗಿ ಓಡಾಡುವ ಮಗು ಒಮ್ಮೆಲೆ ಬೀಳುತ್ತೆ, ಕಾಲು ಎತ್ತೋದಕ್ಕೂ ಆಗದೆ ತುಂಬಾ ಅಳುತ್ತೆ ಅಂತಾ ಹೆತ್ತವರು ಕಣ್ಣೀರಿಡ್ತಾರೆ. ರಾತ್ರಿ ಒಂದೆರಡು ಗಂಟೆವರ್ಗೂ ಮಗು ಮಲಗಲ್ವಂತೆ. ಆಗ ಅಪ್ಪ-ಅಮ್ಮ ಇಬ್ರು ಮಗುವಿನ ಕಾಲ ಬಳಿ ಕೂತ್ಕೊಂಡು ಕಾಲನ್ನ ಮಸಾಜ್ ಮಾಡ್ಬೇಕು. ವೈದ್ಯರ ಈ ಎಡವಟ್ಟಿನ ಬಗ್ಗೆ ಮಗುವಿನ ತಂದೆ ಡಿಎಚ್ಓಗೆ ದೂರು ನೀಡಿದ್ದಾರೆ. ಆದ್ರೆ, ಪ್ರಯೋಜನವಾಗಿಲ್ಲ. ವೈದ್ಯೆ ಜವೇರಿಯಾ ಓದಿರೋದು ಬಿ.ಎ.ಎಂ.ಎಸ್. ಅದು ಆಯುರ್ವೇದಿಕ್. ಅವ್ರು ಇಂಗ್ಲಿಷ್ ಮೆಡಿಸನ್ ನೀಡಿದ್ರಿಂದ ಈಗಾಗಿದೆ. ಈಗ ಅವ್ರು ಪುನಃ ಕ್ಲಿನಿಕ್ ನಡೆಸ್ತಿದ್ದಾರೆ. ನಮಗಾದ ನೋವು ಬೇರ್ಯಾರಿಗೂ ಆಗೋದು ಬೇಡ. ಕೂಡಲೇ ಡಿಎಚ್ಓ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಮುಂದೆ ಆ ಮಗುಗೆ ಕಾಲು ಸರಿಯಾಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ವೈದ್ಯರ ಎಡವಟ್ಟಿನಿಂದಾಗಿ ಬದುಕಿ ಬಾಳಬೇಕಿದ್ದ ಮಗುವೊಂದು ತನ್ನ ಬಾಲ್ಯದ ದಿನಗಳನ್ನೇ ಕಳೆದುಕೊಂಡಿದೆ. ವೈದ್ಯರು ಒಂದು ಕ್ಷಣ ಮೈಮರೆತು ಮಾಡೋ ತಪ್ಪು ಒಂದು ಜೀವವನ್ನ ಜೀವನಪೂರ್ತಿ ಕೊರಗುವಂತೆ ಮಾಡೋದ್ರಲ್ಲಿ ಅನುಮಾನವಿಲ್ಲ. ಇನ್ನಾದ್ರು, ವೈದ್ಯರು ತಮ್ಮ ಜವಾಬ್ದಾರಿ ಅರಿತು ಮತ್ತೊಬ್ಬರ ಬಾಳಲ್ಲಿ ಆಟವಾಡದಂತಹ ರೀತಿ ರೋಗಿಗಳ ಸೇವೆ ಮಾಡಲೆಂಬುದು ನಮ್ಮ ಆಶಯ.