ಮಡಿಕೇರಿ: ಗ್ರಾಮ ಪಂಚಾಯ್ತಿ ನೌಕರರಿಗೆ ವೇತನ ನೀಡುವುದಕ್ಕಾಗಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯ್ತಿ ನೌಕರರ ಸಂಘ ನಗರದ ಜಿ.ಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದೆ.
ಸ್ವಾಮಿ ಆಯೋಗದ ವರದಿಯ ಪ್ರಕಾರ ಗ್ರಾಮ ಪಂಚಾಯ್ತಿ ನೌಕರರಿಗೆ ಸರ್ಕಾರ ಪ್ರತಿವರ್ಷ ಬಜೆಟ್ ನಲ್ಲಿ 380 ಕೋಟಿ ರೂ.ಗಳನ್ನು ಮೀಸಲಿಡಬೇಕು. ಆದರೆ, ಸರ್ಕಾರ ಅನುದಾನವನ್ನು ಮೀಸಲಿಡದ ಕಾರಣ ಗ್ರಾಮ ಪಂಚಾಯ್ತಿ ನೌಕರರು ಕನಿಷ್ಠ ವೇತನವಿಲ್ಲದೆ ದುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಸುಮಾರು 127 ಯೋಜನೆಗಳನ್ನು ಗ್ರಾಮ ಪಂಚಾಯ್ತಿ ಮೂಲಕವೆ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದೆ. ಆದರೆ, ವೇತನದ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ಆದ್ದರಿಂದ ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿಗಳ ಎಲ್ಲಾ ನೌಕರರು ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದರು.
ಸರಕಾರದ ಆದೇಶದಂತೆ ತೆರಿಗೆಗಳನ್ನು ಪರಿಷ್ಕರಿಸಬೇಕು, ತೆರಿಗೆ ಸಂಗ್ರಹದ ಹಣದಲ್ಲಿ ಸಿಬ್ಬಂದಿಗಳ ವೇತನ ಸಂದಾಯ ಮಾಡಬೇಕು, ಕನಿಷ್ಠ ವೇತನ ಜಾರಿ ಮಾಡಬೇಕು, ಬಾಕಿ ಇರುವ ಅನುಮೋದನೆ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು, ಸೇವಾ ಪುಸ್ತಕ ಇಡಲು ಆದೇಶ ನೀಡಬೇಕು, ಜನಶ್ರೀ ವಿಮಾ ಯೋಜನೆ ಜಾರಿ ಮಾಡಬೇಕು, ಎಸ್ಕ್ರೋ ಖಾತೆ ತೆರೆಯಬೇಕು, ಗ್ರೇಡ್-2 ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು, ಕನಿಷ್ಠ ವೇತನ 18 ಸಾವಿರ ನಿಗಧೀ ಮಾಡಬೇಕು, ಲೆಕ್ಕ ಸಹಾಯಕ ಹುದ್ದೆಗೆ ಹಣಕಾಸು ಇಲಾಖೆ ಮಂಜೂರಾತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾ.ಪಂ ನೌಕರರು ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅನೀಶ್, ಸೋಮವಾರಪೇಟೆ ತಾಲ್ಲೂಕು ಖಜಾಂಚಿ ಎಂ.ಎ. ಹಮೀದ್, ಪ್ರಮುಖರಾದ ರಾಧಾಕೃಷ್ಣ ಮತ್ತಿರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.