ಶ್ರೀಮಂಗಲ: ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಡದ ಕುರುಚಲು ಕಾಡಿನಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿದ್ದು, ಹುಲಿಯನ್ನು ಅರಣ್ಯ ಇಲಾಖೆ ವತಿಯಿಂದ ಸುರಕ್ಷಿತವಾಗಿ ಬಿಡಿಸಲಾಗಿದೆ.
ಗ್ರಾಮದ ಶ್ರೀ ಮಂದತವ್ವ ದೇವಸ್ಥಾನಕ್ಕೆ ಹೋಗುವ ಮಾರ್ಗದ ನದಿ ದಡದಲ್ಲಿ ಪ್ರಾಣಿಗಳು ನಿರಂತರವಾಗಿ ಸಂಚರಿಸುವ ಮಾರ್ಗದಲ್ಲಿ ಉರುಳನ್ನು ಹಾಕಲಾಗಿತ್ತು. ಈ ಉರುಳಿಗೆ ಹುಲಿಯ ಎಡ ಕೈ ಸಿಲುಕಿಕೊಂಡು ಅಲ್ಲಿಯೇ ಕುರುಚಲು ಕಾಡಿನೊಳಗೆ ನರಳಾಡುತ್ತಾ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಘಗಳಿಗೆ ಮಾಹಿತಿ ನೀಡಿದರು.
ಸಿಕ್ಕಿ ಹಾಕಿಕೊಂಡ ಹುಲಿ ಸುಮಾರು 2 ವರ್ಷದ ಗಂಡು ಹುಲಿಯಾಗಿದ್ದು, ಉರುಳಿಗೆ ಸಿಲುಕಿದ ಎಡಕೈ ಸ್ವಲ್ಪ ಪ್ರಮಾಣದ ಗಾಯವಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಉರುಳು ಬಿಡಿಸಿ ರಕ್ಷಿಸಿದರು.
ಈ ಸಂಧರ್ಭ ಹುಲಿಯ ಆರೋಗ್ಯ ಉತ್ತಮವಾಗಿದ್ದು, ಬುಧವಾರ ಬೆಳಿಗ್ಗೆ ಅಥವಾ ಮಂಗಳವಾರ ರಾತ್ರಿ ಉರುಳಿಗೆ ಸಿಲುಕಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಡಿ.ಎಫ್.ಒ ಎಂ.ಎಂ. ಜಯಾ, ಪೊನ್ನಂಪೇಟೆ ಆರ್.ಎಫ್.ಒ. ಪಿ.ಬಿ.ಉತ್ತಯ್ಯ, ಮತ್ತಿಗೋಡು ಆರ್.ಎಫ್.ಒ ಕಿರಣ್ ಕುಮಾರ್, ಪಶುವೈದ್ಯಾಧಿಕಾರಿ ನಾಗರಾಜು ಹಾಗೂ ಕೂರ್ಗ್ ವೈಲ್ಡ್ ಲೈಪ್ ಸೊಸೈಟಿಯ ಕುಂಞಂಗಡ ಬೋಸ್ ಮಾದಪ್ಪ, ವೈಲ್ಡ್ ಲೈಪ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯು.ಎಲ್.ಟಿ.ಐ) ಪ್ರತಿನಿಧಿಗಳ ಸಮ್ಮುಖದಲ್ಲಿ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಸಾಗಿಸಲಾಯಿತು.