ಕೆ.ಆರ್.ನಗರ: ಕಳೆದ ನಾಲ್ಕು ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯ ಪುನರಾಂಭಿಸಿ ರೈತರಿಗೆ ಮತ್ತು ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ವತಿಯಿಂದ ತಾಲೂಕು ಕಚೆೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಎರಡನೇ ದಿನವೂ ಮುಂದುವರೆದಿದೆ.
ಸಂಘದ ಅಧ್ಯಕ್ಷ ಹಳೇಮಿರ್ಲೆ ಸುನಯ್ ಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಹುಣಸೂರು ಉಪವಿಭಾಗಾಧಿಕಾರಿ ಡಾ.ಸೌಜನ್ಯ ಕಾರ್ಖಾನೆ ಸಂಬಂಧ ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗುತ್ತದೆ ಅಲ್ಲಿವರೆಗೆ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಆದರೆ ಪ್ರತಿಭಟನಾ ನಿರತ ಜಿ.ಪಂ. ಮಾಜಿ ಸದಸ್ಯ ಎಂ.ಟಿ.ಕುಮಾರ್, ಸುಜಯ್ಗೌಡ, ಹೊಸಹಳ್ಳಿವೆಂಕಟೇಶ್ ಮತ್ತಿತರರ ಮುಖಂಡರು ಮಾತನಾಡಿ ಸರ್ಕಾರ ಕಾರ್ಖಾನೆ ಆರಂಭಿಸುವ ಸಂಬಂಧ ಸೂಕ್ತ ಕ್ರಮಕೈಗೊಂಡು ಆದೇಶ ಹೊರಡಿಸುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಉಪಚುನಾವಣೆ ದೃಷ್ಠಿಯಿಂದ ನಂಜನಗೂಡು ಮತ್ತು ಗುಂಡ್ಲುಪೇಟೆ ತಾಲೂಕಿಗೆ ಅಭಿವೃದ್ದಿ ಕಾರ್ಯಗಳಿಗೆ ಸುಮಾರು 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವ ಸರ್ಕಾರ ಕಾರ್ಖಾನೆ ವ್ಯಾಪ್ತಿಯ 4 ತಾಲೂಕಿನ ರೈತರ ಹಿತದೃಷ್ಠಿಯಿಂದ ಕನಿಷ್ಠ 25 ಕೋಟಿ ರೂ ಬಿಡುಗಡೆ ಮಾಡಿ ಕಾರ್ಖಾನೆ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲವೆ ಎಂದು ಪ್ರಶ್ನಿಸಿದ ಚಳುವಳಿಗಾರರು ಶನಿವಾರದಿಂದ ರಾಜ್ಯ ಮಟ್ಟದ ರೈತ ಮುಖಂಡರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದು ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸತ್ಯಾಗ್ರಹ ನಿರತ ಮುಖಂಡರ ಆರೋಗ್ಯ ತಪಾಸಣೆಯನ್ನು ನಡೆಸಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಯೋಗಾನಂದ, ರೈತ ಮುಖಂಡರಾದ ಶಿವರಾಂ, ವಿಶ್ವಾಸ್ ಗೌಡ, ಲೋಕೇಶ್, ವೆಂಕಟಾಚಲಯ್ಯ, ನಟರಾಜ್, ಅರವಿಂದ, ಕೆಂಪೇಗೌಡ, ಲೋಕನಾಥ್, ಮೋಹನ್ ಕುಮಾರ್, ಮಂಜುನಾಥ್ ಸೇರಿದಂತೆ ನೂರಕ್ಕೂ ಅಧಿಕ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.