ಮಡಿಕೇರಿ: ತೀವ್ರ ಬರ ಪರಿಸ್ಥಿತಿಯಿಂದಾಗಿ ರಾಜ್ಯದ 140 ತಾಲ್ಲೂಕುಗಳು ಸಂಕಷ್ಟದಲ್ಲಿರುವುದರಿಂದ ಸರಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಒತ್ತಾಯಿಸಿದೆ.
ಕಲ್ಬುರ್ಗಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಆರಂಭಗೊಂಡ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಎರಡು ದಿನಗಳ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿರುವ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮನುಮುತ್ತಪ್ಪ ತಿಳಿಸಿದ್ದಾರೆ.
ರಾಜ್ಯವನ್ನು ಕಾಡುತ್ತಿರುವ ತೀವ್ರ ಬರದಿಂದಾಗಿ ಎಲ್ಲಾ ಕೃಷಿ ಬೆಳೆಗಳು ನಾಶವಾಗಿರುವುದರಿಂದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಮತ್ತು ರೈತ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಕಾರ್ಯಕಾರಿಣಿ ಒತ್ತಾಯಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದು, ಕೊಡಗು ಜಿಲ್ಲೆಯ ಬರ ಪರಿಸ್ಥಿತಿಯ ವರದಿಯನ್ನು ಮನುಮುತ್ತಪ್ಪ ಮಂಡಿಸಿದರು.
ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳೀಧರನ್, ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ರಮೇಶ್ ಜಿಗಜಿಣಗಿ, ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಈಶ್ವರಪ್ಪ, ಶಾಸಕರಾದ ಆರ್.ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಜ.22 ರಂದು ಸಮಾರೋಪಗೊಳ್ಳಲಿದೆ ಎಂದು ಮನುಮುತ್ತಪ್ಪ ತಿಳಿಸಿದ್ದಾರೆ.