ಗೋಣಿಕೊಪ್ಪಲು: ನಿಟ್ಟೂರು ಗ್ರಾಮದ ಚೆಕ್ಕೇರ ಸೂರಿ ಅಯ್ಯಪ್ಪ ಅವರ ಗದ್ದೆಯ ಪಕ್ಕದಲ್ಲಿರುವ ಲಕ್ಷ್ಮಣತೀರ್ಥ ಹೊಳೆ ಕೆರೆ ಪೈಸಾರಿಯಲ್ಲಿ ಹುಲಿ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
9ರಿಂದ 10 ವರ್ಷ ಪ್ರಾಯದ ಗಂಡು ಹುಲಿಯ ಮುಖದ ತುಂಬ ಗಾಯವಾಗಿದ್ದು ಕೊಳೆತು ಹೋಗಿತ್ತು. ಕಾಲು ಹಾಗೂ ಕುತ್ತಿಗೆ ಭಾಗವೂ ಕೊಳೆತು ದುರ್ವಾಸನೆ ಬೀರುತ್ತಿತ್ತು. ಮುಖದಲ್ಲಿ ಮುಳ್ಳುಹಂದಿಯ ಮುಳ್ಳೊಂದು ನಾಟಿಕೊಂಡೇ ಇತ್ತು. ಮುಳ್ಳು ಹಂದಿಯನ್ನು ತಿನ್ನಲು ಹೋಗಿ ಮುಖಕ್ಕೆ ಗಾಯಮಾಡಿರುವುದು ಮಹಜರಿನಿಂದ ತಿಳಿದು ಬಂದಿದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಉಮಾಶಂಕರ್ ಹೇಳಿದ್ದಾರೆ.
ಹುಲಿ ಗಾಯಗೊಂಡಿದ್ದರಿಂದ ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಸೊರಗಿರುವುದು ಕಂಡು ಬಂದಿದೆ. ಕಳೆದ ಶುಕ್ರವಾರ ಮಲ್ಲೂರಿನಲ್ಲಿ ಕಾರ್ಮಿಕ ಕರಿಯನ ಮೇಲೆ ದಾಳಿ ಮಾಡಿದ ಹುಲಿ ಇದೇ ಎಂದು ತಿಳಿದು ಬಂದಿದೆ.ಏಕೆಂದರೆ ಅಂದು ಹುಲಿಯನ್ನು ಹತ್ತಿರದಿಂದ ಕಂಡವರು ಕುತ್ತಿಗೆಯಲ್ಲಿ ಗಾಯಗೊಂಡಿದ್ದರ ಬಗ್ಗೆ ತಿಳಿಸಿದ್ದರು ಎಂದು ಮತ್ತಿಗೋಡು ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಸಿಸಿಎಫ್ ಮನೋಜ್ ಕುಮಾರ್, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠ, ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಒಂದು ವಾರದಲ್ಲಿ ನಿಟ್ಟೂರು, ಕಾನೂರು ವ್ಯಾಪ್ತಿಯಲ್ಲಿ ಎರಡು ಹುಲಿಗಳು ಮೃತಪಟ್ಟಂತಾಗಿದೆ.