ಗೋಣಿಕೊಪ್ಪಲು: ವೈಲ್ಡ್ ಲೈಫ್ ಫಸ್ಟ್ ಮತ್ತು ಗೋಣಿಕೊಪ್ಪಲು ಪ್ರೌಢ ಶಾಲಾ ಸಂಯುಕ್ತ ಆಶ್ರಯದಲ್ಲಿ ಕಾಡಿನ ಬೆಂಕಿ ಅನಾಹುತ, ಅಪಾಯ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಂತೆ ದಿನವಾದ ಇಂದು ಗೋಣಿಕೊಪ್ಪಲು ನಗರದಲ್ಲಿ ಕಾಡ್ಗಿಚ್ಚು ಜಾಗೃತಿ ಜಾಥಾ ನೆರವೇರಿತು.
ಗೋಣಿಕೊಪ್ಪಲು ಮುಖ್ಯರಸ್ತೆ, ಬಸ್ ನಿಲ್ಧಾಣ, ಮಾರುಕಟ್ಟೆ ಪ್ರದೇಶ ಹಾಗೂ ಪಾಲಿಬೆಟ್ಟ ರಸ್ತೆಯಲ್ಲಿ ಮೆರವಣಿಗೆ ಸಾಗಿ ಅರಿವು ಮೂಡಿಸುವ ಕರಪತ್ರಗಳನ್ನು ಗ್ರಾಮೀಣ ಭಾಗದ ಜನತೆಗೆ ಪ್ರಮುಖವಾಗಿ ವಿತರಿಸಲಾಯಿತು.
ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ಅವರ ನೇತ್ರತ್ವದಲ್ಲಿ ಜರುಗಿದ ಜಾಥಾವನ್ನು ಪ್ರೌಢಶಾಲಾ ಶಿಕ್ಷಕಿ ಶಾಂತಿ ಕೃಷ್ಣ ಉದ್ಘಾಟಿಸಿದರು.
ಶಾಲಾ ‘ಟೈಗರ್ ಪಗ್’ ಬಳಗದ ಸುಮಾರು 34 ವಿದ್ಯಾರ್ಥಿಗಳು, ಮೈಸೂರು ಇನ್ಫೋಸಿಸ್ ಸ್ನೇಕ್ ಸತೀಶ್, ಶ್ರೀಮಂಗಲದ ಉರಗ ತಜ್ಞ ಕುಂಜ್ಞಂಗಡ ಬೋಸ್ಮಾದಪ್ಪ, ಬೆಂಗಳೂರು ಪರಿಸರ ಪ್ರಿಯರಾದ ಸುಧೀಂದ್ರ, ಭಾಸ್ಕರ್, ಶಾಲಾ ಶಿಕ್ಷಕಿ ಸಿಮ್ನಾ, ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್, ಪೊಲೀಸರಾದ ನಂದಕುಮಾರ್ ಹಾಗೂ ಮೇದಪ್ಪ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಸುಮಾರು 4000 ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಜಾಗೃತಿ ಮೂಡಿಸಲಾಯಿತು.