ಚಾಮರಾಜನಗರ: ಸಾಮಾನ್ಯವಾಗಿ ಪ್ರವಾಸಿಗರು ಗುಂಡ್ಲುಪೇಟೆಯ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಕಾಡು ಪ್ರಾಣಿಗಳನ್ನು ನೋಡಲೆಂದೇ ತೆರಳುತ್ತಾರೆ. ಹೀಗೆ ತೆರಳುವ ಮಂದಿಗೆ ಕೆಲವೊಮ್ಮೆ ಜಿಂಕೆ ಹೊರತುಪಡಿಸಿ ಇನ್ಯಾವುದೇ ಪ್ರಾಣಿಗಳು ನೋಡಲು ಸಿಗದೆ ಹಿಂತಿರುಗಿ ಬಂದ ಉದಾಹರಣೆಗಳು ಇವೆ.
ಹೀಗಿರುವಾಗ ಅರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಬಂಡೀಪರ ಅಭಯಾರಣ್ಯದ ರಾಯಭಾರಿ ಎಂದೇ ಕರೆಯಲ್ಪಡುವ ಪ್ರಿನ್ಸ್ ಹುಲಿ ತನ್ನ ಸಂಗಾತಿಯೊಂದಿಗೆ ದರ್ಶನ ನೀಡಿದರೆ ಅದನ್ನು ಕಣ್ಣಾರೆ ನೋಡುವ ಪ್ರವಾಸಿಗರಿಗೆ ಹೇಗಾಗಬೇಡ.. ಒಮ್ಮೆಲೆ ಅಚ್ಚರಿ, ಸಂತೋಷವಾಗುವುದರಲ್ಲಿ ಸಂಶಯವಿಲ್ಲ. ಕಳೆದ ಎರಡು ದಿನಗಳ ಹಿಂದೆ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಕಾಡಿನ ನಡುವೆ ಪ್ರಿನ್ಸ್ ಹುಲಿ ಕಾಣಲು ಸಿಕ್ಕಿದೆ. ಇದನ್ನು ಕಂಡು ಖುಷಿಪಟ್ಟ ಪ್ರವಾಸಿಗರು ಮನಸ್ಸೋ ಇಚ್ಚೆ ಅದರ ಚಿತ್ರಗಳನ್ನು ತಮ್ಮ ಕ್ಯಾಮರಾ ಮತ್ತು ಮೊಬೈಲ್ ಗಳಲ್ಲಿ ಸೆರೆ ಹಿಡಿದ್ದಾರೆ.
ಬಂಡೀಪುರ ಸಮೀಪದ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರಾದ ಒರಿಸ್ಸಾ ಮೂಲದ ಅಂಜರುಸ್ಸ್ ಹಾಗೂ ಸ್ನೇಹಿತರಿದ್ದ ತಂಡ ಸಫಾರಿಗಾಗಿ ಬಂಡೀಪುರ ಅಭಯಾರ್ಯದಲ್ಲಿ ತೆರಳಿತ್ತು. ಅರಣ್ಯ ಇಲಾಖೆ ವಾಹನ ಅವರನ್ನು ಹೊತ್ತೊಯ್ದಿತ್ತು. ಹೀಗೆ ಸಾಗಿದವರಿಗೆ ಅಚ್ಚರಿ ಕಾದಿತ್ತು.ಅರಣ್ಯದ ಪೊದೆಯೊಳಗೆ ಪ್ರಿನ್ಸ್ ಹುಲಿ ಕಾಣಿಸಿತ್ತು. ಅರಣ್ಯದೊಳಗಿನಿಂದ ರಾಜಗಾಂಭೀರ್ಯದಿಂದ ನಡೆದು ವಾಹನದ ಬಳಿಗೆ ಬಂದು ಹಾಗೆಯೇ ಸ್ವಲ್ಪ ಹೊತ್ತು ವ್ಯಾನನ್ನೇ ದಿಟ್ಟಿಸಿ ಬಳಿಕ ಪೊದೆಯೊಳಗೆ ಹೋಗಿದೆ. ಇದರ ಜತೆಗೆ ಸಂಗಾತಿಯೂ ಇದ್ದಿದ್ದು ವಿಶೇಷವಾಗಿತ್ತು. ಈ ಕುರಿತಂತೆ ಅಂಜರುಸ್ಸ್ ತಾವು ಸೆರೆ ಹಿಡಿದ ಚಿತ್ರಗಳನ್ನು ನೀಡಿದ್ದು ಆ ಚಿತ್ರಗಳು ಹರಿದಾಡುತ್ತಿವೆ. ವಾಹನದ ಬಳಿ ಬಂದು ಎಲ್ಲರನ್ನು ದಿಟ್ಟಿಸಿ ನೋಡಿದ ಪ್ರಿನ್ಸ್ ಯಾರಿಗೂ ತೊಂದರೆ ನೀಡದೆ ತನ್ನ ಪಾಡಿಗೆ ತಾನು ಪೊದೆಯೊಳಗೆ ನಿಧಾನವಾಗಿ ತೆರಳಿತು ಎಂದು ಪ್ರತ್ಯಕ್ಷವಾಗಿ ನೋಡಿದ ಪ್ರವಾಸಿಗರು ತಿಳಿಸಿದ್ದಾರೆ.