ಚಾಮರಾಜನಗರ: ಕೊಳ್ಳೇಗಾಲದ ಹನೂರಿನ ಕಾಡಂಚಿನ ರೈತರ ಬದುಕು ನರಕವಾಗಿದೆ. ಕಷ್ಟಪಟ್ಟು ದುಡಿದು ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ರಾತ್ರಿ ಹಗಲೆನ್ನದೆ ಜಮೀನಿನಲ್ಲೇ ಬೀಡು ಬಿಟ್ಟು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರೂ ಕಣ್ತಪ್ಪಿಸಿ ನುಗ್ಗಿ ಬೆಳೆಯನ್ನೆಲ್ಲ ನಾಶ ಮಾಡಿಬಿಡುತ್ತಿವೆ.
ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರು ಜೀವನೋಪಾಯಕ್ಕೆ ಏನು ಮಾಡಬೇಕೆಂದು ತೋಚದೆ ಕಣ್ಣೀರಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಡಾನೆಗಳು, ಕಾಡುಹಂದಿಗಳು ಸೇರಿದಂತೆ ಕೆಲವು ಪ್ರಾಣಿಗಳು ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದರೆ ಚಿರತೆ, ಹುಲಿಯಂತಹ ಪ್ರಾಣಿಗಳು ಜಾನುವಾರುಗಳನ್ನು ತಿಂದು ಹಾಕುತ್ತಿವೆ. ಹೀಗಾಗಿ ಕಾಡಂಚಿನಲ್ಲಿ ಜಮೀನು ಹೊಂದಿರುವ ರೈತರು ಕೃಷಿ ಮಾಡಿ ಬದುಕುವುದೇ ಕಷ್ಟ ಸಾಧ್ಯವಾಗಿದೆ.
ಈ ಬಾರಿ ವಾಡಿಕೆಯ ಮಳೆಯಾಗದ ಕಾರಣ ಈಗಾಗಲೇ ಅರಣ್ಯದಲ್ಲಿ ಹಸಿರು ಮೇವು, ಗೆಡ್ಡೆ ಗೆಣಸುಗಳು ಸಿಗದಂತಾಗಿದ್ದು, ಇದರಿಂದಾಗಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೂ ಆಹಾರದ ಸಮಸ್ಯೆ ಪ್ರಾರಂಭವಾಗಿವೆ. ಇವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಹಾರ ಅರಸಿ ಓಡಾಡುತ್ತಿದ್ದು, ಮೇವು, ನೀರಿಗಾಗಿ ಕಾಡು ಬಿಟ್ಟು ನಾಡಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಬರುವ ಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ವರ್ಷದ ಕೂಳನ್ನೇ ನಾಶ ಮಾಡುತ್ತಿವೆ.
ಇದೀಗ ಕೊಳ್ಳೇಗಾಲದ ಶಿವಪುರ ಗ್ರಾಮದ ಮಂದಿ ನೀರಿಲ್ಲದಿದ್ದರೂ ಹೇಗೋ ಕಷ್ಟಪಟ್ಟು ಜೋಳವನ್ನು ಬೆಳೆದಿದ್ದಾರೆ. ಬೆಳೆದ ಬೆಳೆ ಫಸಲಿಗೆ ಬಂದರೆ ಒಂದಿಷ್ಟು ಹಣ ಬರುತ್ತದೆ. ಜೀವನ ಕಳೆಯಬಹುದೆಂದು ನಂಬಿದ್ದರು. ಅಷ್ಟೇ ಅಲ್ಲ ಯಾವ ಸಮಯದಲ್ಲಿ ಬೇಕಾದರೂ ಕಾಡಾನೆಗಳು ಜಮೀನಿಗೆ ನುಗ್ಗಬಹುದೆಂದು ಮರದ ಮೇಲೆ ಅಟ್ಟಣಿಗೆ ಹಾಕಿಕೊಂಡು ಕಾಯುತ್ತಿದ್ದಾರೆ. ಆದರೆ ಕಾಡಾನೆ ಬದಲಿಗೆ ಕಾಡು ಹಂದಿಗಳು ಜಮೀನಿಗೆ ನುಗ್ಗಿ ಜೋಳದ ಫಸಲನ್ನು ನಾಶ ಮಾಡುತ್ತಿವೆ. ಹಿಂಡುಗಟ್ಟಲೆ ನುಗ್ಗುವ ಹಂದಿಗಳು ಬೆಳೆಯನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಈಗಾಗಲೇ ಶಿವಪುರ ಗ್ರಾಮದ ರೈತ ಜಗದೀಶ್ ಎಂಬುವರು ಎರಡು ಎಕರೆ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಮುಸುಕಿನ ಜೋಳ ಕಾಡಂದಿಗಳ ಪಾಲಾಗಿದೆ. ಇವರು ಬರದ ನಡುವೆಯೂ ಲಕ್ಷಾಂತರ ರೂ. ವೆಚ್ಚ ಮಾಡಿ ಬೋರ್ವೆಲ್ ಕೊರೆಯಿಸಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ವಿದ್ಯುತ್ ಸಮಸ್ಯೆ ನಡುವೆಯೂ ನೀರು ಹಾಯಿಸಿ ಬೆಳೆ ಬೆಳೆದಿದ್ದರು. ಫಸಲು ಬಂದು ಇನ್ನೇನು ಕೆಲವೇ ದಿನಗಳಲ್ಲಿ ಮುಸುಕಿನ ಜೋಳ ಕೊಯ್ಲಿಗೆ ಬರುವುದಿತ್ತು ಅಷ್ಟರಲ್ಲೇ ಕಾಡಂದಿಗಳು ಸದ್ದಿಲ್ಲದೆ ಜಮೀನಿಗೆ ನುಗ್ಗಿ ಫಸಲನ್ನು ನಾಶ ಮಾಡಿವೆ. ಇದರಿಂದ ಕಂಗಾಲಾಗಿರುವ ರೈತರು ಅರಣ್ಯ ಇಲಾಖೆ ಪರಿಹಾರ ನೀಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.