ಮಡಿಕೇರಿ: ರೋಟರಿ ಸಂಸ್ಥೆಯ ಮೂಲ ತತ್ವವಾದ ಸ್ನೇಹ, ಒಡನಾಟದ ಸಂದೇಶ ಸಾರುತ್ತಾ ವಿದೇಶದ 11 ಮಂದಿ ರೋಟರಿ ಸದಸ್ಯರು ಬೈಕ್ ನಲ್ಲಿ ಕರ್ನಾಟಕದಾದ್ಯಂತ ಸಂಚರಿಸುತ್ತಾ ಮಡಿಕೇರಿಗೆ ಆಗಮಿಸಿದ್ದಾರೆ. ಕೊಡಗಿನ ಕಾಫಿ ಕಂಪಿನ ಸವಿ ಪಡೆದ ವಿದೇಶಿ ಬೈಕರ್ ಗಳ ತಂಡವು ಭಾರತ ತೀವ್ರಗತಿಯಲ್ಲಿ ಪ್ರಗತಿ ಹೊಂದುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಇಂಗ್ಲೇಂಡ್ ನ ಅಲೆಗ್ಸಾಂಡರ್ ಸಿ.ಕುಕ್, ಪೌಲ್ ಸ್ವಾವೆನ್, ನ್ಯೂಜಿಲ್ಯಾಂಡ್ ನ ಸ್ಟುವರ್ಟ್ ಮಾಕ್ಲೀನ್, ಸ್ಪೇನ್ ನ ಮೌರೀನ್ ಮೋಫಾತ್, ಸ್ವೀಡನ್ ನ ಲ್ಯಾರಿ ಸರ್ವೇನ್ , ಪೋರ್ಚುಗಲ್ ನ ಜೋಸ್ ಕಾರ್ಡೋಸ್, ಕ್ಯಾಟರೀನಾ ಕಾರ್ಡೋಸೋ, ಡಂಕನ್ ಪೌಲ್ ಮೋಫಾತ್, ಭಾರತದ ಪಳನಿಯಪ್ಪನ್ ಸುಬ್ಬಯ್ಯ, ಅಶ್ವಿನಿ ಎಲ್ ಶೆಟ್ಟಿ, ರಾಬರ್ಟ್ ಕೆಂಪ್, ಮಡಿಕೇರಿಯ ಕೇಶವ ಪ್ರಸಾದ್ ಮುಳಿಯ ಸದಸ್ಯರಾಗಿರುವ ರೈಡ್ ಫಾರ್ ರೋಟರಿ ಎಂಬ ಹೆಸರಿನ ಬೈಕ್ ಸವಾರಿ ಮಡಿಕೇರಿಯನ್ನು ಪ್ರವೇಶಿಸಿದೆ. ಈ ಸಂದರ್ಭ ಬೈಕ್ ಸವಾರರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.
ರೈಡ್ ಫಾರ್ ರೋಟರಿ ಬೈಕ್ ಸವಾರಿಯ ಸಂಚಾಲಕ ರಾಮದಾಸ್ ಸುದ್ದಿಗಾರರಿಗೆ ಮಾಹಿತಿ ನೀಡಿ, ರೋಟರಿಯ ಮೂಲ ಉದ್ದೇಶವಾಗಿರುವ ಸ್ನೇಹ ಮತ್ತು ಒಡನಾಟದ ಸಂದೇಶ ಸಾರುತ್ತಾ 10 ದಿನಗಳಿಂದ ವಿದೇಶಿಯರನ್ನೊಳಗೊಂಡ ಬೈಕ್ ಸವಾರರು ಕರ್ನಾಟಕದ ವಿವಿದೆಡೆ ಸಂಚರಿಸಿದ್ದಾರೆ. ಈವರೆಗೂ 1654 ಕಿ.ಮೀ. ಸಂಚರಿಸಿದ್ದು, ಕರ್ನಾಟಕದ ಬೆಂಗಳೂರು, ಮೈಸೂರು, ಹಾಸನ, ಹಂಪಿ, ಧಾರವಾಡ, ಮಂಗಳೂರು, ಪುತ್ತೂರುಗಳನ್ನು ಸಂದರ್ಶಿಸಿದ್ದಾರೆ. ಗೋವಾಕ್ಕೂ ಬೈಕ್ ತಂಡ ತೆರಳಿದೆ. ರೋಟರಿ ಫೌಂಡೇಶನ್ ನ ಶತಮಾನೋತ್ಸವ ಸಂದರ್ಭ ಹಮ್ಮಿಕೊಂಡಿರುವ ಈ ಬೈಕ್ ಸವಾರಿಯ ಸಂದರ್ಭ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆಯೂ ಜನರಿಗೆ ತಿಳಿಸಲಾಗುತ್ತಿದೆ ಎಂದರು.
ಬೈಕ್ ಸವಾರಿಯ ಸಂಚಾಲಕ ಮುರಳೀಧರ್ ಪ್ರಭು ಮಾತನಾಡಿ, ಭಾರತದ ಅತಿಥಿ ದೇವೋ ಭವ ಎಂಬ ಪ್ರವಾಸೋದ್ಯಮ ಸಂದೇಶ ಸಾರುವ ಉದ್ದೇಶವೂ ಬೈಕ್ ಸವಾರಿಯಲ್ಲಿದೆ. ಕರ್ನಾಟಕದ ವೈಭವನನ್ನು ಅಂತರರಾಷ್ಟ್ರೀಯ ರೋಟರಿ ರಾಯಭಾರಿಗಳಿಗೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.
ಬೈಕ್ ರ್ಯಾಲಿಯ ಸಂಚಾಲಕ ಕೆ.ಕೆ.ವಿಶ್ವನಾಥ್ ಮಾತನಾಡಿ, ಕೊಡಗಿನ ಕಾಫಿ ತೋಟಗಳಿಗೆ ಭೇಟಿ ನೀಡಿರುವ ಬೈಕ್ ಸವಾರರು ಕಾಫಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಂದಲಪಟ್ಟಿಯ ನಿಸರ್ಗ ವೈಭವವೂ ಮನಸೂರೆಗೊಂಡಿದೆ. ರೋಟರಿಯ ಸಾಮಾಜಿಕ ಅಭಿಯಾನದಲ್ಲಿ ಇದೊಂದು ವಿನೂತನ ಪ್ರಯತ್ನವಾಗಿದೆ ಎಂದು ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, 60 ವರ್ಷಕ್ಕಿಂತ ಹೆಚ್ಚು ಪ್ರಾಯದವರೇ 2 ಸಾವಿರ ಕಿ.ಮೀ. ಅಂತರದ ಬೈಕ್ ಸವಾರಿಯಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದರು. ರೋಟರಿಯ ವಸುಧೈವ ಕುಟುಂಬಕಂ ಎಂಬ ಸಂದೇಶಕ್ಕೆ ಈ ಬೈಕ್ ಸವಾರಿ ಮತ್ತಷ್ಟು ಉತ್ತೇಜನ ನೀಡಿದೆ ಎಂದೂ ಕೇಶವಪ್ರಸಾದ್ ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಬೈಕ್ ಸವಾರರು ಆಗಮಿಸಿದ ಸಂದರ್ಭ ಭಾರತೀಯ ಸಂಪ್ರದಾಯದಂತೆ ಹಣೆಗೆ ಕುಂಕುಮ ಹಚ್ಚಿ, ಹೂವಿನ ಮಾಲೆ ಹಾಕಿ ವಿದೇಶಿಯರನ್ನು ಸ್ವಾಗತಿಸಲಾಯಿತು. ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಸಿ.ಆರ್.ಪ್ರಶಾಂತ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ನವೀನ್, ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ ಹಾಜರಿದ್ದರು.