ಚಾಮರಾಜನಗರ: ತಾಲೂಕು ಕಚೇರಿ ಮುಂದೆ ಅತ್ತಿಂದಿತ್ತ ಅಲೆದಾಡುತ್ತಾ.. ಆಗೊಮ್ಮೆ ಈಗೊಮ್ಮೆ ಸಾಹೇಬರು ಬಂದ್ರಾ ಎಂದು ಅಧಿಕಾರಿಯ ಕೊಠಡಿಯತ್ತ ದಿಟ್ಟಿಸುತ್ತಾ.. ತಾಲೂಕು ಕಚೇರಿ ಆವರಣದಲ್ಲಿ ದೈನೇಶಿಗಳಂತೆ ಕುಳಿತ ವೃದ್ದರನ್ನು ನೋಡಿದರೆ ಕರಳು ಚುರ್ ಎನ್ನುತ್ತದೆ.
ಈ ದೃಶ್ಯ ಕಂಡು ಬರುವುದು ಕೊಳ್ಳೇಗಾಲದ ಹನೂರಿನಲ್ಲಿ. ಈ ವೃದ್ದರೆಲ್ಲ ಏಕೆ ಹೀಗೆ ತಾಲೂಕು ಕಚೇರಿ ಮುಂದೆ ಕೂತು ಅಧಿಕಾರಿಗಳನ್ನು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗಳು ಕಾಡದಿರದು ಆದರೆ ಇಲ್ಲಿ ಯಾರೋ ಮಾಡಿದ ಎಡವಟ್ಟಿಗೆ ವೃದ್ದರು ಮತ್ತು ಕಂದಾಯ ಅಧಿಕಾರಿಗಳು ಪರದಾಡುವಂತಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದರೆ ಪಿಂಚಣಿದಾರ ವೃದ್ದರಿಗೆ ನೀಡಿದ ಸ್ಮಾರ್ಟ್ ಕಾರ್ಡ್ ನಲ್ಲಿ ಆದ ಕೆಲವು ತಪ್ಪುಗಳು ಇದೀಗ ಎಲ್ಲರೂ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆಯಲ್ಲದೆ, ವೃದ್ದರ ವೃದ್ದಾಪ್ಯ ವೇತನಕ್ಕೂ ಕತ್ತರಿ ಬೀಳುವಂತಾಗಿದೆ.
ಹನೂರು ವ್ಯಾಪ್ತಿಯಲ್ಲಿ ಬಡವೃದ್ಧರಿದ್ದು ಇವರಿಗೆ ಸರ್ಕಾರ ಕೊಡುವ ವೃದ್ದಾಪ್ಯ ವೇತನವೇ ಆಧಾರವಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಬಹಳಷ್ಟು ವೃದ್ದರಿಗೆ ವೃದ್ದಾಪ್ಯ ವೇತನ ತಲುಪಿಲ್ಲ. ಇದ್ಯಾಕೆ ಬಂದಿಲ್ಲ ಎಂದು ಕೇಳಲು ಹೋದವರಿಗೆ ಒಂದಷ್ಟು ಎಡವಟ್ಟಾಗಿರುವುದು ಗೋಚರಿಸಿದೆ. ಅಂಚೆ ಕಚೇರಿಯಲ್ಲಿ ವೃದ್ದಾಪ್ಯ ವೇತನ ಪಡೆಯುತ್ತಿದ್ದ ವೃದ್ದರ ಅನುಕೂಲಕ್ಕಾಗಿ ಸರ್ಕಾರ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದು, ಇದನ್ನು ನಿರ್ವಹಿಸಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಈ ಕಂಪನಿಯ ನೌಕರರು ವೃದ್ದಾಪ್ಯ ವೇತನ ಪಡೆಯುವ ವೃದ್ದರ ಭಾವಚಿತ್ರ ತೆಗೆದು ವಿವರಗಳನ್ನು ಭರ್ತಿ ಮಾಡಬೇಕಿತ್ತು. ಹೀಗೆ ಭರ್ತಿ ಮಾಡುವಾಗ ಕೆಲವೊಂದು ತಪ್ಪುಗಳಾಗಿದ್ದು ಇದರಿಂದ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ.
ಸರ್ಕಾರ ಒಳ್ಳೆಯ ಉದ್ದೇಶದಿಂದಲೇ ಸ್ಮಾರ್ಟ್ ಕಾರ್ಡ್ ನ್ನು ಜಾರಿಗೆ ತಂದಿದ್ದರೂ ಅದರ ನಿರ್ವಹಣೆಯಲ್ಲಾದ ಲೋಪದೋಷಗಳು ವೃದ್ದರಿಗೆ ತಲೆನೋವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ, ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಿದೆ. ಕೆಲವು ವೃದ್ದರು ಅನಾರೋಗ್ಯ ಪೀಡಿತರಾಗಿದ್ದು ಅವರು ಕಚೇರಿ ಆವರಣದಲ್ಲಿ ಬಂದು ಮಲಗುವಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾನವೀಯ ದೃಷ್ಠಿಯಿಂದ ಕಾಳಜಿ ವಹಿಸಿ ಆಗಿರುವ ತೊಂದರೆಯನ್ನು ಸರಿಪಡಿಸಿ ವೃದ್ದರ ಸಹಾಯಕ್ಕೆ ಮುಂದಾಗಬೇಕಾಗಿದೆ.