ಮಾಗಡಿ: ಸುಣ್ಣ ಬಣ್ಣ ಕಾಣದ.. ಮಳೆ ಬಂದರೆ ಸೋರುವ.. ಗಾಳಿ ಬಂದರೆ ಅಲುಗಾಡುವ ಪಾಳುಮನೆ. ಆ ಮನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ತಾಯಿ ಮಗಳಿಬ್ಬರು ವಾಸ ಮಾಡುತ್ತಿದ್ದರು.
ಹೊರಗಿನಿಂದ ಆ ಮನೆಯನ್ನು ನೋಡುವಾಗ ಇವತ್ತೋ ನಾಳೆಯೋ ಬಿದ್ದು ಹೋಗುತ್ತದೆ ಎಂಬ ಭಯ ಜನರನ್ನು ಕಾಡುತ್ತಿತ್ತು. ಆದರೆ ಅದೇ ಮನೆಯಲ್ಲಿ ತಾಯಿ ಮಗಳಿಬ್ಬರು ಯಾವುದೇ ಭಯವಿಲ್ಲದೆ ಜೀವನ ಸಾಗಿಸುತ್ತಿದ್ದರು. ಸದ್ಯ ಗ್ರಾಮಪಂಚಾಯಿತಿ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅವರಿಗೆ ಆ ಪಾಳು ಮನೆಯಿಂದ ಮುಕ್ತಿಕೊಡಿಸಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದೆ. ಇದೆಲ್ಲ ನಡೆದಿರುವುದು ಮಾಗಡಿ ತಾಲೂಕಿನ ಕೊಂಡಹಳ್ಳಿ ಗ್ರಾಮದಲ್ಲಿ. ಅಲ್ಲಿನ ನಿವಾಸಿ ವೆಂಕಟಲಕ್ಷ್ಮಮ್ಮ ಮತ್ತು ಮಗಳು ಮಂಜುಳ ಎಂಬುವರೇ ಪಾಳುಮನೆಯಲ್ಲಿ ಬದುಕು ಕಟ್ಟಿಕೊಂಡಿದ್ದವರು.
ಗ್ರಾಮದಲ್ಲಿ ಸ್ವಂತ ಜಮೀನಿದ್ದರೂ ಇವರು ಹಳೆಯ ಪಾಳುಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಕಾರಣ ಜಮೀನು ಮಾಡುವವರು ಯಾರೂ ಇಲ್ಲ. ಅದೀಗ ಪಾಳು ಬಿದ್ದಿದೆ. ವೆಂಕಟಲಕ್ಷ್ಮಮ್ಮ ಅವರ ಗಂಡ ಮತ್ತು ಮಗ ಬೆಂಗಳೂರಿನಲ್ಲಿದ್ದಾರಂತೆ. ಆದರೆ ತಾಯಿ ಮಗಳು ಕಳೆದ ಹತ್ತು ವರ್ಷಗಳಿಂದ ಇಲ್ಲಿಯೇ ಇದ್ದರು. ಆ ಮನೆಯಲ್ಲಿ ಯಾವುದೇ ಮೂಲಭೂತ ಸೌಕರ್ಯವೂ ಇರಲಿಲ್ಲ. ಜತೆಗೆ ಮಳೆ ಬಂದರೆ ಯಾವಾಗ ಬೇಕಾದರು ಬಿದ್ದು ಹೋಗುವಂತಿತ್ತು. ಬಹಳಷ್ಟು ಸಾರಿ ಮನೆಯನ್ನು ಬದಲಾಯಿಸಲು ಹೇಳಿದ್ದರೂ ಬದಲಾಯಿಸಲು ಅವರು ಒಪ್ಪಿರಲಿಲ್ಲ. ಜತೆಗೆ ಬೇರೆ ಯಾರೂ ಅವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಈ ವಿಚಾರ ಗ್ರಾಮಪಂಚಾಯಿತಿಗೆ ತಿಳಿದು ಇದೇ ಮನೆಯಲ್ಲಿದ್ದು ಒಂದು ವೇಳೆ ಪಾಳುಮನೆ ಬಿದ್ದು ಹೋದರೆ ಅಪಾಯ ತಪ್ಪಿದಲ್ಲ ಎಂಬ ಕಾರಣಕ್ಕೆ ಅವರನ್ನು ಬೇರೆಡೆಗೆ ಕಳುಹಿಸುವ ಯೋಚನೆ ಮಾಡಲಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಾಜು ಅವರು ಶಿಶು ಅಭಿವೃದ್ದಿ ಇಲಾಖೆಗೆ ವಿಷಯ ಮುಟ್ಟಿಸಿದ ಮೇರೆಗೆ ತಾಲೂಕು ಶಿಶು ಅಭಿವೃದ್ದಿ (ಸಿಡಿಪಿಒ) ಸುರೇಂದ್ರ ಅವರು ಮಹಿಳಾ ಸಿಬ್ಬಂದಿಯೊಂದಿಗೆ ಕೊಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತಾಯಿ ಮಗಳ ಮನವೊಲಿಸಿ ರಾಮನಗರದ ಸ್ವಾಗತ್ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದ ಯಾರೊಂದಿಗೆ ಮಾತನಾಡದೆ ತಮ್ಮ ಪಾಡಿಗೆ ತಾವು ಎಂಬಂತೆ ಇದ್ದರು. ಇದೀಗ ಹೇಗೋ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸದ್ಯ ಅವರು ಏಕೆ ಹಾಗಿದ್ದರು? ಮಾನಸಿಕವಾಗಿ ಆರೋಗ್ಯವಾಗಿರಲಿಲ್ಲವೇ? ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕಾಗಿದ್ದು ಬಳಿಕ ತಿಳಿಯಬೇಕಿದೆ. ವಿಷಯ ತಿಳಿದು ಸ್ಥಳಕ್ಕೆ ತಾ.ಪಂ.ಅಧ್ಯಕ್ಷ ಮಣಿಗಾನಹಳ್ಳು ಸುರೇಶ್ ಭೇಟಿ ನೀಡಿ ಸಾತನೂರು ಗ್ರಾಮ ಪಂಚಾಯಿತಿ ಪಿಡಿಒ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಾಜು ಅವರು ಅನ್ಯಾಯವಾಗಿ ತಾಯಿಯಿಂದ ಮಗಳು ಇದೇ ಮನೆಯಲ್ಲಿದ್ದು ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿತ್ತು ಮೇಲಾಧಿಕಾರಿಗಳು ತಾಯಿ ಮಗಳನ್ನು ಮನವೊಲಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು ಈಗ ಅವರ ಸಂಬಂಧಿಕರಿಗೆ ತಿಳಿಸಿ ಹೊಸದಾಗಿ ಪಂಚಾಯಿತಿಯಿಂದಲೇ ಶೀಟ್ ಹಾಕಿಸಿ ಶೌಚಾಲಯ, ಸಾನ್ನದ ಗೃಹ, ನೀರಿನ ವ್ಯವಸ್ಥೆಯನ್ನು ಕೂಡ ಮಾಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.