ಮಡಿಕೇರಿ: ರಾಜ್ಯ ಗೃಹ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ನಿವೇಶನ ನೀಡುವ ಭರವಸೆ ನೀಡಿದ್ದು, ಇದನ್ನು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಸ್ವಾಗತಿಸುತ್ತದೆ ಎಂದು ತಿಳಿಸಿರುವ ಸಮಿತಿಯ ಪ್ರಮುಖರಾದ ಎ.ಕೆ. ಸುಬ್ಬಯ್ಯ, ನಿವೇಶನ ಹಂಚುವ ಸಂದರ್ಭ ಕೊಡಗು ಜಿಲ್ಲೆಯನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಭರವಸೆ ಕೇವಲ ಹೇಳಿಕೆಗಷ್ಟೆ ಸೀಮಿತವಾಗಬಾರದು, ಸಂಕಷ್ಟದಲ್ಲಿರುವ ಆದಿವಾಸಿಗಳಿಗೆ ನಿವೇಶನ ಹಂಚಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ಯಾವುದೇ ಆದಿವಾಸಿ ಕುಟುಂಬಕ್ಕೆ ನ್ಯಾಯಬದ್ಧವಾಗಿ ಒಂದಿಂಚು ಜಾಗ ಕೂಡ ಸಿಕ್ಕಿಲ್ಲ. ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ಕೇವಲ ಹಕ್ಕುಪತ್ರವನ್ನು ನೀಡಲಾಗಿದೆಯೆ ಹೊರತು ಆರ್ಟಿಸಿಯನ್ನು ನೀಡಿಲ್ಲ. ಅತೀ ಹೆಚ್ಚು ಕಡೆಗಣಿಸಲ್ಪಟ್ಟ ಮತ್ತು ದೌರ್ಜನ್ಯಕ್ಕೆ ಒಳಗಾದ ಆದಿವಾಸಿಗಳು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೊಡಗಿನ ಆದಿವಾಸಿಗಳಿಗೆ ಮೊದಲು ಭೂಮಿ ಹಂಚಿಕೆಯಾಗಬೇಕು. ಈ ನಿಟ್ಟಿನಲ್ಲಿ ದಿಡ್ಡಳ್ಳಿಯ ನಿರಾಶ್ರಿತರನ್ನು ಮೊದಲು ಆದ್ಯತೆಯ ಮೇರೆ ಪರಿಗಣಿಸಬೆೇಕೆಂದು ಎ.ಕೆ.ಸುಬ್ಬಯ್ಯ ಒತ್ತಾಯಿಸಿದರು.
ದಿಡ್ಡಳ್ಳಿಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದವರನ್ನು ರಾತೋರಾತ್ರಿ ತೆರವುಗೊಳಿಸುವ ಮೂಲಕ ಅಸಹಾಯಕರ ಮೇಲೆ ಸರ್ಕಾರ ಘೋರ ಕೃತ್ಯವೆಸಗಿದೆ. ಇದರ ಪ್ರಾಯಶ್ಚಿತ್ತವಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ ಮೊದಲು ಜಾಗ ನೀಡಿ, ನಂತರ ಜಿಲ್ಲೆಯ ಎಲ್ಲಾ ಆದಿವಾಸಿಗಳಿಗೆ ನಿವೇಶನ ಹಂಚಿಕೆಯಾಗಬೇಕೆಂದು ಒತ್ತಾಯಿಸಿದರು. ಈ ಹಿಂದೆ ಆದಿವಾಸಿಗಳು ನೆಲೆಸಿದ್ದ ದಿಡ್ಡಳ್ಳಿ ಪ್ರದೇಶ ಪೈಸಾರಿ ಎನ್ನುವುದಕ್ಕೆ ನಮ್ಮ ಬಳಿ ದಾಖಲೆ ಇದೆ. ಅರಣ್ಯ ಪ್ರದೇಶವೆಂದು ದಾಖಲೆ ಇದ್ದರೆ ಅದನ್ನು ಸರ್ಕಾರ ಒದಗಿಸಲಿ ಎಂದು ಅವರು ಸವಾಲೆಸೆದರು. ಸುಮಾರು 9 ಸಾವಿರ ಏಕರೆ ಕಂದಾಯ ಭೂಮಿಯನ್ನು 1999 ಜುಲೈ 15 ರಂದು ಅರಣ್ಯ ಇಲಾಖೆಗೆ ಮರ ಬೆಳೆಸುವುದಕ್ಕಾಗಿ ಕಂದಾಯ ಇಲಾಖೆ ನೀಡಿತ್ತು. ಜುಲೈ 17 ರಂದು ತಹಶೀಲ್ದಾರ್ ಕಛೇರಿಯಲ್ಲಿ ಈ ಜಾಗವನ್ನು ಅರಣ್ಯ ಪೈಸಾರಿ ಎಂದು ದಾಖಲಿಸಲಾಯಿತು. ಇದರ ಹಿಂದೆ ಬಡವ ವಿರೋಧಿ ಶಕ್ತಿಗಳು ಕಾರ್ಯಾಚರಣೆ ನಡೆಸಿದ ಕುರುಹಿದೆ. ದೀನ ದಲಿತರನ್ನು ವಂಚಿಸಬೇಕೆಂದೆ ಭೂಮಿಯ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯಿತೆಂದು ಎ.ಕೆ.ಸುಬ್ಬಯ್ಯ ಆರೋಪಿಸಿದರು. ಅರಣ್ಯ ಪೈಸಾರಿ ಎಂದು ದಾಖಲೆ ಸೃಷ್ಟಿ ಮಾಡಿರುವುದೇ ಕಾನೂನು ಬಾಹಿರವೆಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ದಿಡ್ಡಳ್ಳಿ ಹೋರಾಟದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಯಾರು ಏನೇ ಅಡ್ಡಿ ಆತಂಕ ಸೃಷ್ಟಿಸಿದರೂ ಹೋರಾಟವನ್ನು ತಡೆಯಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದರು. ರಾಯ್ ಡೇವಿಡ್, ಆದಿವಾಸಿ ಮುಖಂಡರಾದ ಜೆ.ಪಿ.ರಾಜು ಹಾಗೂ ಜೆ.ಕೆ.ರಾಮು ಅವರು ದಿಡ್ಡಳ್ಳಿ ನಿರಾಶ್ರಿತರ ವಿರುದ್ಧ ನಡೆದ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದಾರೆ ಎಂದು ಸುಬ್ಬಯ್ಯ ಟೀಕಿಸಿದರು. ಆರಂಭದಲ್ಲಿ ರಾಯ್ ಡೇವಿಡ್ ಹಾಗೂ ಜೆ.ಕೆ.ರಾಮು ಅವರುಗಳು ದಿಡ್ಡಳ್ಳಿಗೆ ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇವರ ನೇತೃತ್ವದಲ್ಲೆ ಹೋರಾಟ ಮುಂದುವರಿದಿದ್ದರೂ ನಾವು ಬೆಂಬಲ ನೀಡುತ್ತಿದ್ದೆವು ಎಂದು ಸುಬ್ಬಯ್ಯ ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಳಂಬವಾಗಿಯಾದರು ದಿಡ್ಡಳ್ಳಿ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ಇನ್ನು ಮುಂದೆಯೂ ನಿರಾಶ್ರಿತರಿಗೆ ನಿವೇಶನ ಸಿಗುವಲ್ಲಿಯವರೆಗೆ ಅಗತ್ಯ ಅನುದಾನ ನೀಡುವ ಮೂಲಕ ಅಸಹಾಯಕರ ಯೋಗ ಕ್ಷೇಮದ ಬಗ್ಗೆ ಸರ್ಕಾರ ಕಾಳಜಿ ತೋರಬೇಕೆಂದು ಸುಬ್ಬಯ್ಯ ಒತ್ತಾಯಿಸಿದರು.
ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ : ಎ.ಕೆ.ಸುಬ್ಬಯ್ಯ ಎಚ್ಚರಿಕೆ
ಮಡಿಕೇರಿ: ದಿಡ್ಡಳ್ಳಿ ನಿರಾಶ್ರಿತರಿಗೆ ಈ ಹಿಂದೆ ಇದ್ದ ಪ್ರದೇಶದಲ್ಲೇ ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮೂಲಕ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎ.ಕೆ.ಸುಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಸಚಿವರಾದ ಆಂಜನೇಯ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಅದೇ ಪ್ರದೇಶದಲ್ಲಿ ಕಾನೂನಿನ ಚೌಕಟ್ಟಿನಡಿ ಅವಕಾಶವಿದ್ದರೆ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ದೀನ ದಲಿತರ ವಿರೋಧಿಯಂತೆ ವರ್ತಿಸಿದ್ದಾರೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು.
ದಿಡ್ಡಳ್ಳಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಗೂ ಗೈರು ಹಾಜರಾಗಿದ್ದ ಸಚಿವ ಸೀತಾರಮ್ ಈಗಾಗಲೆ ಆಗಿರುವ ನಿರ್ಧಾರಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಂಡವಾಳಶಾಹಿಗಳ ಪರವಾಗಿರುವ ಉಸ್ತುವಾರಿ ಸಚಿವರಿಂದಾಗಿ ಕೊಡಗು ನರಳುತ್ತಿದೆ. ಇವರ ಆಪ್ತ ಸಹಾಯಕರಾದ ಹರೀಶ್ ಬೋಪಣ್ಣ ಉಸ್ತುವಾರಿ ಸಚಿವರೋ ಅಥವಾ ಸೀತಾರಾಮ್ ಅವರೋ ಎನ್ನುವ ಪ್ರಶ್ನೆ ಉದ್ಭವಿಸಿದೆ. ಹರೀಶ್ ಬೋಪಣ್ಣ ಅವರ ಕೈಗೊಂಬೆಯಂತೆ ವರ್ತಿಸುತ್ತಿರುವ ಸಚಿವ ಸೀತಾರಾಮ್ ಅವರು ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೆ, ಆದಿವಾಸಿಗಳಿಂದ ಸುಮಾರು 6.10 ಲಕ್ಷ ರೂ. ಹಣ ಪಡೆದ ಅರಣ್ಯ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಇವರಿಂದ ಸಾಧ್ಯವಾಗಿಲ್ಲವೆಂದು ಟೀಕಿಸಿದರು.