ಮಡಿಕೇರಿ: ಸ್ಮೈಲ್ ಪ್ಲೀಸ್ ಎನ್ನುವ ಛಾಯಾಗ್ರಾಹಕರು ‘ಸ್ಮೈಲ್’ ಮಿತಿಯಲ್ಲಿ ಇದ್ದಾರೆಯೇ ಎನ್ನುವುದನ್ನು ಅವಲೋಕಿಸಿಕೊಳ್ಳುವ ಮೂಲಕ, ಛಾಯಾಗ್ರಾಹಕ ಸಮೂಹ ತಮ್ಮೆಲ್ಲ ಸಂಕಷ್ಟಗಳ ಬಗೆಹರಿಕೆಗೆ ಸಂಘಟಿತರಾಗಬೇಕೆಂದು ಕರ್ನಾಟಕ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷರಾದ ಹೆಚ್.ಎಸ್.ನಾಗೇಶ್ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ವತಿಯಿಂದ ನಗರದ ಕೆಳಗಿನ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಛಾಯಾಗ್ರಾಹಕರ ಛಾಯಾ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1960-70ರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ಛಾಯಾಗ್ರಾಹಕರು ಬೆಳೆಯುತ್ತಾ ಬಂದರು. ಆದರೆ ಪ್ರಸ್ತುತ ಛಾಯಾಗ್ರಹಣ ಕ್ಷೇತ್ರ ಡಿಜಿಟಲೀಕರಣಗೊಳ್ಳುವ ಮೂಲಕ ಛಾಯಾಗ್ರಾಹಕರು ಅವಸಾನದ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಲ್ಕು ಗೋಡೆಗಳ ಕತ್ತಲ ಕೋಣೆಯಲ್ಲಿ ಫಿಲ್ಮ್ ರೋಲ್ ಗಳು ಛಾಯಾಚಿತ್ರಗಳಾಗಿ ರೂಪುಗೊಳ್ಳುತ್ತಿದ್ದ ದಿನಗಳು ಬದಲಾಗಿ ಇಂದು ಪ್ರತಿಯೊಬ್ಬರ ಕೈಗಳಲ್ಲಿರುವ ಮೊಬೈಲ್ ಗಳೇ ಕ್ಯಾಮೆರಾಗಳಾಗಿವೆ. ಇದರೊಂದಿಗೆ ಸರ್ಕಾರ ತನ್ನ ವಿವಿಧ ಇಲಾಖೆಗಳಿಗೆ ವೆಬ್ ಕ್ಯಾಮೆರಾಗಳನ್ನು ಒದಗಿಸುತ್ತಿದೆ. ಈ ಬೆಳವಣಿಗೆ ಛಾಯಾಗ್ರಾಹಕರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಹೆಚ್.ಎಸ್.ನಾಗೇಶ್ ಅಭಿಪ್ರಾಯಪಟ್ಟರು.
ಡಿಜಿಟಲೀಕರಣದಿಂದ ಬೀದಿ ಪಾಲಾದ ಛಾಯಾಗ್ರಾಹಕರ ಕುಟುಂಬಗಳ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಮತ್ತೊಂದೆಡೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ತಾಂತ್ರಿಕತೆಯಿಂದ ಕ್ಯಾಮೆರಾಗಳಿಗೆ ತಮ್ಮ ದುಡಿಮೆಯ ಹಣವನ್ನು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಛಾಯಾಗ್ರಹಣ ಕ್ಷೇತ್ರವನ್ನು ಪರೋಕ್ಷವಾಗಿ ಕೆಲವು ಭಾರೀ ಕಂಪೆನಿಗಳು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುತ್ತಿರುವ ಅಪಾಯ ನಮ್ಮ ಮುಂದಿದೆ ಎಂದರು.
ರಾಜ್ಯದಲ್ಲಿ 4 ಲಕ್ಷದಷ್ಟು ಛಾಯಾಗ್ರಾಹಕರು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಛಾಯಾಗ್ರಾಹಕರು ತಮ್ಮ ಸಂಘದ ಮೂಲಕ ಸಂಘಟಿತರಾಗಿ ಸರಕಾರದ ಗಮನ ಸೆಳೆಯಬೇಕೆಂದು ನಾಗೇಶ್ ಕರೆ ನೀಡಿದರು.
ರಾಜ್ಯದ ಛಾಯಾಗ್ರಾಹಕರನ್ನು ಉಳಿಸಲು ಮತ್ತು ಅವರ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ‘ಛಾಯಾಗ್ರಾಹಕರ ಅಕಾಡೆಮಿ’ ಸ್ಥಾಪಿಸಬೇಕೆಂದು ಸಂಘಟನೆ ರಾಜ್ಯ ಸರ್ಕಾರವನ್ನು ಈಗಾಗಲೇ ಆಗ್ರಹಿಸಿದ್ದು, ಇದಕ್ಕೆ ಪೂರಕ ಸ್ಪಂದನೆ ದೊರಕಿರುವುದಾಗಿ ತಿಳಿಸಿದರು.
ಛಾಯಾಗ್ರಾಹಕರ ಸಂಘದ ದಕ್ಷಿಣ ವಲಯದ ಕಾರ್ಯದರ್ಶಿ ರೂಬೆನ್ ಮಾತನಾಡಿ, ಛಾಯಾಗ್ರಾಹಕರ ಸಮಸ್ಯೆಗಳ ಬಗೆಹರಿಕೆಗೆ ಪ್ರತಿಯೊಂದು ಜಿಲ್ಲಾ ಸಂಘಗಳು ಸಂಘಟನೆಗೊಳ್ಳುವ ಮೂಲಕ ರಾಜ್ಯ ಸಂಘದ ಕೈ ಬಲಪಡಿಸಬೇಕು. ಕಳೆದ ಸಾಲಿನಲ್ಲಿ ಸಂಘದ ಮೂಲಕ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಮತ್ತೊಮ್ಮೆ ಬೃಹತ್ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಕೊಡಗು ಜಿಲ್ಲೆಯ ಹಿರಿಯ ಛಾಯಾಗ್ರಾಹಕರನ್ನು ಸಮಾರಂಭದಲ್ಲಿ ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸಂಘದ ದಿನಚರಿ ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಾಯಿತು.
ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ವಿಶ್ವಕುಮಾರ್ ಗುಡ್ಡೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಸ್ಥಾಪಕಾಧ್ಯಕ್ಷ ಎಂ.ಪಿ. ಲಕ್ಷ್ಮಣ್, ಮಾಜಿ ಅಧ್ಯಕ್ಷ ಕೆ.ಎಸ್. ನಾಗೇಶ್, ಜಿಲ್ಲಾ ಕಾರ್ಯದರ್ಶಿ ಸುನಿಲ್, ರಾಜ್ಯ ಸಂಘದ ನಿದೇರ್ಶಕರಾದ ಹೆಚ್.ಎಸ್. ಸಲೀಂ, ವಿಜಯ್ ರಾಘವನ್, ಮೈಸೂರು ಜಿಲ್ಲಾಧ್ಯಕ್ಷ ಮುಕುಂದ, ಸಂಪತ್ ಕುಮಾರ್, ರಶೀದ್, ನಾಗೇಂದ್ರ, ದಕ್ಷಿಣ ವಲಯದ ಖಜಾಂಚಿ ಸುರೇಂದ್ರ, ಮಂಜಿನನಗರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಲೂಯಿಸ್, ವೀರಾಜಪೇಟೆ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಶಿವ ಕುಮಾರ್ ಟಿ., ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಸುಬ್ರಮಣಿ, ಕುಶಾಲನಗರ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಶಾಂತಪ್ಪ ಬಿ., ಶನಿವಾರಸಂತೆ ಇಮೇಜ್ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಎಸ್.ಡಿ. ಲಿಂಗರಾಜು ಗೌಡ ಅವರು ಉಪಸ್ಥಿತರಿದ್ದರು.
ಸೇನಾನಿಗಳಿಗೆ ಗೌರವ ಅರ್ಪಣೆ: ಸಮಾರಂಭಕ್ಕೂ ಮೊದಲು ಛಾಯಾಗ್ರಾಹಕರ ಜಿಲ್ಲಾ ಮತ್ತು ರಾಜ್ಯ ಸಂಘದ ಪ್ರಮುಖರು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕಕ್ಕೆ, ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಜನರಲ್ ತಿಮ್ಮಯ್ಯ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು. ನಂತರ ನಗರದಲ್ಲಿ ಮೆರವಣಿಗೆ ನಡೆಸಿದರು.