ಚಿಕ್ಕಮಗಳೂರು: ವೈಜ್ಞಾನಿಕವಾಗಿ ಕಸ ವಿಂಗಡಿಸಬೇಕೆಂಬುದು ತಾಲ್ಲೂಕಿನ ಇಂದಾವರ ಗ್ರಾಮಸ್ಥರ ಹಲವಾರು ದಿನಗಳ ಬೇಡಿಕೆ. ಕಳೆದ 8 ದಿನಗಳಿಂದ ಇಂದಾವರ ಗ್ರಾಮಸ್ಥರು ಕಸ ಸುರಿಯಲು ಅವಕಾಶ ನೀಡ್ತಿಲ್ಲ. ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆ ತಾಲ್ಲೂಕಿನ ಇಂದಾವರ ಗ್ರಾಮಸ್ಥರು ಹಾಗೂ ನಗರಸಭೆ ನಡುವಿನ ವಿವಾದ ದೊಡ್ಡದಾಗಿ ಏರ್ಪಟ್ಟಿದ್ದು ನಗರದ ಕಸವೆಲ್ಲಾ ನಗರಸಭೆಯ ಆವರಣದಲ್ಲಿ ಸಂಗ್ರಹಿಸುತ್ತಿದೆ.
ಇಂದಾವರ ಗ್ರಾಮದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲಾಗಿದೆ. ಅಲ್ಲಿನ ಗ್ರಾಮಸ್ಥರು, ದನ, ಕರುಗಳು ತ್ಯಾಜ ಸೇವಿಸುತ್ತವೆ, ಕುಡಿಯುವ ನೀರು ಹಾಳಾಗುತ್ತಿದ್ದು ಕೆರೆಯ ನೀರೆಲ್ಲಾ ಮಲಿನವಾಗುತ್ತಿದೆ ಎಂದೂ ಆರೋಪಿಸಿ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲು ಗೋಡೆ ನಿರ್ಮಿಸಿ ಎಂದು ಹಲವಾರು ತಿಂಗಳಿನಿಂದ ಜಿಲ್ಲಾಡಳಿತ ಮತ್ತು ನಗರಸಭೆಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಬಹುತೇಕ ಸುತ್ತಲು ಗೋಡೆ ನಿರ್ಮಿಸಲಾಗಿದೆ. ಆದ್ರೆ ವೈಜ್ಞಾನಿಕವಾಗಿ ಕಸ ವಿಂಗಡಣೆಯಾಗದಿರುವ ಹಿನ್ನಲೆಯಲ್ಲಿ ಕರಗಿದ ಕಸದಿಂದ ಲಿಚೆಟ್ ಎಂಬ ಆರ್ಸೇನಿಕ್ ದ್ರವ್ಯ ಕಸದಿಂದ ಉತ್ಪತ್ತಿಯಾಗುತ್ತಿದೆ. ಅದು ಭೂಮಿ ಹಾಗೂ ಕುಡಿಯುವ ನೀರಿಗೆ ಸೇರುತ್ತಿದ್ದು, ಗ್ರಾಮದ ಸುತ್ತಲು ಸೊಳ್ಳೆ, ನೊಣಗಳು ಹೆಚ್ಚಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈ ಹಿನ್ನಲೆಯಲ್ಲಿ ಕಳೆದ 8 ದಿನಗಳಿಂದ ನಗರದ 35 ವಾರ್ಡ್ಗಳ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯಲು ಗ್ರಾಮಸ್ಥರು ಅವಕಾಶ ನೀಡುತ್ತಿಲ್ಲ.
ಇಂದಾವರದಲ್ಲಿ ನಗರದ ಕಸವನ್ನು ಸುರಿಯಲು ಗ್ರಾಮಸ್ಥರು ಅವಕಾಶ ನೀಡದ ಹಿನ್ನಲೆಯಲ್ಲಿ ಕಸವನ್ನು ತೆಗೆದುಕೊಂಡು ಹೋದ ಪೌರ ಕಾರ್ಮಿಕರು ಕಸದ ವಾಹನವನ್ನು ವಾಪಸ್ಸು ತೆಗೆದುಕೊಂಡು ಬರುತ್ತಿದ್ದು, ನಗರದ 35 ವಾರ್ಡ್ ಗಳ ಕಸವನ್ನು ನಗರ ಸಭೆಯ ಆವರಣದಲ್ಲಿಯೇ ಸುರಿಯುತ್ತಿದ್ದಾರೆ. ಇದರಿಂದ ಈಡೀ ನಗರಸಭೆಗೆ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ನಗರಸಭೆ ಒಳಗೆ ಬರೋದಕ್ಕೆ ತುಂಬಾ ಕಷ್ಟಕರವಾಗಿದೆ. ಪ್ರಮುಖವಾಗಿ ನಗರಸಭೆಯ ಕಟ್ಟಡದ ಪಕ್ಕದಲ್ಲಿಯೇ 8 ದಿನಗಳಿಂದ ಕಸ ತಂದೂ ಸುರಿಯುತ್ತಿದ್ದಾರೆ. ಕಸದ ರಾಶಿ ದಿನದಿಂದ ದಿನಕ್ಕೆ ಆವರಣದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಸಭೆಯಲ್ಲಿ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪಕ್ಕದಲ್ಲಿಯೇ ಲೋಕೋಪಯೋಗಿ ಕ್ವಾಟ್ರಸ್ಸ್ ಇದ್ದು ಅವರು ಕೂಡ ಉಸಿರಾಡೋದಕ್ಕೆ ತೊಂದರೆಯಾಗುತ್ತಿದೆ. ನಗರಸಭೆಗೆ ಹೊಂದಿಕೊಂಡತೆ ಶಾಲೆ ಇದ್ದು ಸಾವಿರಾರೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಸದ ಗಬ್ಬು ವಾಸನೆಯಿಂದ ಸರಿಯಾಗಿ ಕಲಿಕೆ ಮಾಡಲು ಸಾಧ್ಯವಾಗದೆ ಮೂಗು ಮುಚ್ಚಿಕೊಂಡು ಶಾಲೆಯಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿ ಪ್ರತಿಯೊಬ್ಬರಿಗೂ ಕಿರಿಕಿರಿಯಾಗುತ್ತಿದೆ.
ಒಟ್ಟಾರೆಯಾಗಿ ನಗರದ ಕಸವೆಲ್ಲಾ ಇಂದಾವರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹ ಮಾಡಲಾಗುತ್ತಿತ್ತು. ಆದ್ರೆ ಅಲ್ಲಿನ ಗ್ರಾಮಸ್ಥರು ಕಸ ಸುರಿಯಲು ಬಿಡದ ಕಾರಣ ಈಗ ನಗರಸಭೆಯ ಆವರಣದಲ್ಲಿಯೇ ಸುರಿಯುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ಸಂಗ್ರಹಿಸಿ ವಿಂಗಡನೆ ಮಾಡದಿದ್ದರೇ ಇಲ್ಲಿನ ಸಮಸ್ಯೆ ಬಗೆ ಹರಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಮತ್ತು ನಗರಸಭೆ ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಿದೆ.