ಮಡಿಕೇರಿ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಸುಮಾರು ಒಂಭತ್ತು ಕಾರ್ಮಿಕ ಸಂಘಟನೆಗಳು ಜ.31 ರಂದು ವಿಧಾನಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿವೆ ಎಂದು ಸಿಐಟಿಯು ನ ಜಿಲ್ಲಾ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಕಾರ್ಮಿಕರ ಪರವಾದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಳೆದ ಅನೇಕ ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ದೊರೆಯದೆ ಇರುವ ಕಾರಣ ಜ.31 ರಿಂದ ಅನಿರ್ಧಾಷ್ಟಾವಧಿ ಮುಷ್ಕರ ಆರಂಭಿಸುತ್ತಿರುವುದಾಗಿ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಲ್ಲಾ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂ. ಕನಿಷ್ಠ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಂಗನವಾಡಿ, ಬಿಸಿಯೂಟ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಖಾಯಂಗೊಳಿಸಬೇಕು, ಗ್ರಾ.ಪಂ ನೌಕರರಿಗೆ ವೇತನವನ್ನು ನೇರವಾಗಿ ಸರಕಾರವೇ ಪಾವತಿಸಬೇಕು, ತೋಟ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ತೋಟ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಬೇಕು, ಎಲ್ಲಾ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೆ ತರಬೇಕು, ತೋಟ ಕಾರ್ಮಿಕರಿಗೆ ದಿನಕ್ಕೆ 600 ರೂ. ಕಡಿಮೆ ಇಲ್ಲದಂತೆ ಕನಿಷ್ಠ ವೇತನ ನಿಗಧಿಗೊಳಿಸಬೇಕು, ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ 2015 ರ ಕಾಯ್ದೆಯನ್ನು ರದ್ದುಗೊಳಿಸಬೇಕು, ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕುಗಳ ಮೇಲೆ ತೆರಿಗೆ ವಿಧಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೆಚ್.ಬಿ.ರಮೇಶ್ ತಿಳಿಸಿದರು.
ಕೊಡಗಿನ ಕಾರ್ಮಿಕರು ಕೂಡ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಿಐಟಿಯು ನ ಖಜಾಂಚಿ ಎ.ಸಿ.ಸಾಬು ಮಾತನಾಡಿ ಜಿಲ್ಲೆಯಲ್ಲಿ ಮರಳಿನ ಕೊರತೆ ಮಿತಿ ಮೀರಿದ್ದರೂ ಸರಕಾರ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲವೆಂದು ಆರೋಪಿಸಿದರು. ಮರಳಿನ ಕೊರತೆಯಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸಮಸ್ಯೆಯನ್ನು ಬಗೆ ಹರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಕೂಡ ಜ.31 ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಫೋಟೋ :: ಸಿಐಟಿಯು