ಗುಂಡ್ಲುಪೇಟೆ: ಕಳೆದ ತಿಂಗಳು ತಾಲೂಕಿನ ಹುತ್ತೂರಿನಲ್ಲಿ ಜಿಲ್ಲಾಡಳಿತವು ಪ್ರಾರಂಭಿಸಿರುವ ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವನ್ನು ನೀಡಲು ನಿರಾಕರಿಸುವ ಮೂಲಕ ನಿಧಾನಕ್ಕೆ ಮುಚ್ಚುವ ಸಿದ್ದತೆ ನಡೆಸುತ್ತಿದೆ ಎಂದು ಜಾನುವಾರು ಮಾಲೀಕರು ಆರೋಪಿಸಿದ್ದಾರೆ.
ಮೇವು ಸಂಗ್ರಹವಿಲ್ಲ ಎಂಬ ಕಾರಣ ಹೇಳಿ ಜಾನುವಾರುಗಳಿಗೆ ಮೇವು ವಿತರಣೆ ಮಾಡುತ್ತಿಲ್ಲ ಎಂದು ಜಾನುವಾರು ಮಾಲೀಕರು ದೂರಿದರೆ, ಮೇವು ಸಂಗ್ರಹಕ್ಕಾಗಿ ಕಂದಾಯಾಧಿಕಾರಿಗಳು ಬೇರೆ ಬೇರೆ ತಾಲೂಕುಗಳಿಗೆ ತೆರಳಿದ್ದಾರೆಂದು ಹೇಳುವ ತಾಲೂಕು ಆಡಳಿತ ನುಣುಚಿಕೊಳ್ಳುತ್ತಿದೆ.
ಆದರೆ ಮೇವು ಸಂಗ್ರಹ ಮಾಡಿಕೊಳ್ಳದ ಪರಿಣಾಮವಾಗಿ ದೂರದೂರುಗಳಿಂದ ಬಂದಿರುವ ಸಾವಿರಕ್ಕೂ ಹೆಚ್ಚಿನ ಜಾನುವಾರುಗಳು ಹಸಿವಿನಿಂದ ಬಳಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವನ್ನು ಜನ ಮಾಡುತ್ತಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಪ್ರಾರಂಭಿಸಿ ನಿಜವಾದ ಬರ ನಿರ್ವಹಣೆಗೆ ಮುಂದಾಗುವಂತೆ ಒತ್ತಾಯಿಸಿದ್ದರೂ ಇದನ್ನು ನಿರ್ಲಕ್ಷಿಸಿ ಗೋಶಾಲೆ ನಡೆಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಉದ್ದೇಶವನ್ನು ಅವರ ಸಾವಿನ ನಂತರ ಕೈಬಿಡಲು ಸಿದ್ದತೆ ನಡೆಸಿದಂತೆ ಕಂಡುಬರುತ್ತಿದ್ದು, ಕೂಡಲೇ ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.