ಸುಂಟಿಕೊಪ್ಪ: ವ್ಯಕ್ತಿಯೊಬ್ಬರ ಮೂಗಿನೊಳಗೆ ಸೇರಿಕೊಂಡಿದ್ದ ಜಿಗಣೆಯನ್ನು ಸ್ಥಳೀಯ ವೈದ್ಯರೊಬ್ಬರು ಹೊರತೆಗೆಯುವ ಮೂಲಕ ಗಮನಸೆಳೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೂತಿ ಗ್ರಾಮದ ಕೃಷಿಕರಾದ ಕೆ.ಎ.ರಾಮಚಂದ್ರ ಅವರ ಮೂಗಿನಿಂದ ಕಳೆದ 17 ದಿನದಿಂದ ಆಗಾಗ್ಗೆ ಬಿಟ್ಟು ಬಿಟ್ಟು ರಕ್ತಸ್ರಾವವಾಗುತ್ತಿತ್ತು.
ಮೊದಲಿಗೆ ಕಾಫಿ ಕೊಯ್ಲು, ಕಣದ ಕೆಲಸದಿಂದ ಶರೀರದಲ್ಲಿ ಉಷ್ಣಾಂಶ ಹೆಚ್ಚಾಗಿ ಹೀಗಾಗಿರಬಹುದೆಂದು ಭಾವಿಸಿದ ಅವರು ನಿರ್ಲಕ್ಷ್ಯ ತೋರಿದ್ದರು. ಆದರೆ ಮತ್ತೆ ಎಡೆಬಿಡದೆ ಮೂಗಿನಿಂದ ರಕ್ತ ಸುರಿಯತೊಡಗಿದಾಗ ಸೋಮವಾರಪೇಟೆ, ಮಡಿಕೇರಿಯ ಹೀಗೆ ಆಸ್ಪತ್ರೆಗೆ ತೆರಳಿ ಔಷಧಿ ಪಡೆದಿದ್ದಾರೆ. ಆದರೆ ರಕ್ತ ಮೂಗಿನಿಂದ ಸೋರುವುದು ಮಾತ್ರ ನಿಲ್ಲಲಿಲ್ಲ.
ಈ ನಡುವೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸಿದಾಗ ಅವರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಲು ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ರಾಮಚಂದ್ರ ಅವರು ಮರಳಿ ಮನೆಗೆ ಬಂದಿದ್ದಾರೆ. ಅಲ್ಲದೆ ಕೊನೆ ಪ್ರಯತ್ನ ಎಂಬಂತೆ ಸುಂಟಿಕೊಪ್ಪದಲ್ಲಿರುವ ಶಂಕರ್ ಚಿಕಿತ್ಸಾಲಯದ ಇಎನ್ಟಿ ತಜ್ಞರಿಗೆ ತೋರಿಸಿ ಬಿಡೋಣ ಎಂಬ ನಿರ್ಧಾರ ಮಾಡಿದ್ದಾರೆ. ಅದರಂತೆ ಚಿಕಿತ್ಸಾಲಯದ ಡಾ.ದೀಪಕ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ರಾಮಚಂದ್ರ ಅವರನ್ನು ಹಾಸಿಗೆ ಮೇಲೆ ಮಲಗಿಸಿ ಮೂಗಿನಿಂದ ರಕ್ತ ಬರುವುದನ್ನು ಗಮನಿಸಿದ ವೈದ್ಯರಾದ ಡಾ. ದೀಪಕ್ ಅವರಿಗೆ ಮೂಗಿನೊಳಗೆ ಏನೋ ಸೇರಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಜಿಗಣೆ ಎಂಬುದು ಮನದಟ್ಟಾಗಿದೆ. ಅಲ್ಲದೆ ಮೂಗಿನೊಳಗೆ ಜೀವಂತವಾಗಿದ್ದ ಜಿಗಣೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಗಣೆ ಮುಗಿನೊಳಗೆ ಸೇರಿಕೊಂಡು ರಕ್ತ ಹೀರುತ್ತಿದ್ದರಿಂದ ರಕ್ತ ಹೊರಬರುತ್ತಿತ್ತು ಎನ್ನಲಾಗಿದೆ. ತಮ್ಮ ವೈದ್ಯ ವೃತ್ತಿ ಜೀವನದ 17 ವರ್ಷದಲ್ಲಿ ಇದೇ ಮೊದಲ ಅನುಭವ ಎಂದು ಡಾ.ದೀಪಕ್ ತಿಳಿಸಿದ್ದಾರೆ. ಜಿಗಣೆಯನ್ನು ಹೊರತೆಗೆದ ಬಳಿಕ ರಾಮಚಂದ್ರ ಅವರು ನಿರಾಳರಾಗಿದ್ದಾರೆ. ಒಂದು ವೇಳೆ ಜಿಗಣೆ ಅಲ್ಲಿಯೇ ಇದ್ದಿದ್ದರೆ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿತ್ತು ಎನ್ನಲಾಗಿದೆ.