ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾತ್ಕೋಳಿ ಅರಣ್ಯ ಪ್ರದೇಶದಲ್ಲಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಪೂರೈಸಲು ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ನೀರು ತುಂಬಿಸಲು ತುಂಗಾ ತಿರುವು ಯೋಜನೆ ಕೈಗೆತ್ತಿಕೊಂಡು ಕಾಮಾಗಾರಿ ಆರಂಭಿಸಿದ್ದು, ಈ ಯೋಜನೆಯನ್ನು ಸ್ಥಳೀಯರು ವಿರೋಧಿಸಿ ಅಪ್ಪಿಕೋ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್.ಆರ್.ಪುರ ತಾಲೂಕಿನ ಕುಸುಬೂರು ಗ್ರಾಮದ ಸರ್ವೇ ನಂಬರ್ 58 ರಲ್ಲಿರುವ ತೂಬಿನಕೆರೆ ಬಲಭಾಗದಲ್ಲಿ ಪೂರ್ವ ದಿಕ್ಕಿನ ಕಡೆಗೆ ಹಾದು ಹೋಗುವಂತೆ ಗುರುತಿಸಲಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಬರುವ ಸಾತ್ಕೋಳಿ, ಮಾರಿದಿಬ್ಬ, ಕುಸುಬೂರು ಸೇರಿದಂತೆ ಅನೇಕ ಹಳ್ಳಿಗಳ ಮನೆಗಳು ಹಾಗೂ ರೈತರ ಜಮೀನುಗಳು ಬಲಿಯಾಗುತ್ತಿದೆ. ಜೊತೆಗೆ ಈ ವ್ಯಾಪ್ತಿ ಬರುವ ಸಮೃದ್ದವಾದ ಅರಣ್ಯ ಪ್ರದೇಶವೂ ನಾಶವಾಗಲಿದ್ದು ಸುಮಾರು 22 ಸಾವಿರಕ್ಕೂ ಹೆಚ್ಚು ಮರಗಳು ನೆಲಕಚ್ಚಲಿದ್ದು ಗ್ರಾಮಸ್ಥರು ಮರಗಳನ್ನು ಅಪ್ಪಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈಗಾಗಲೇ ನೀರಾವರಿ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ಬದಲಿ ಮಾರ್ಗವನ್ನು ಸೂಚಿಸಿದ್ದಾರೆ. ಈಗ ಇಲಾಖೆ ಗುರುತಿಸಿರುವ ತೂಬಿನಕೆರೆ ಬಲಭಾಗದಲ್ಲಿ ಪೂರ್ವ ದಿಕ್ಕಿಗೆ ಕಾಲುವೆ ಹಾದು ಹೋಗುವ ಬದಲು, ಕಾಲುವೆಯನ್ನು ತೂಬಿನಕೆರೆಯ ಎಡಭಾಗದಲ್ಲಿ ಪೂರ್ವ ದಿಕ್ಕಿನ ಮಾರ್ಗವಾಗಿ ತಗೆದುಕೊಂಡು ಹೋದಲ್ಲಿ ಗ್ರಾಮಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ಆ ಪ್ರದೇಶ ಬಯಲು ಪ್ರದೇಶವಾಗಿರುವುದರಿಂದ ಕಾಡನ್ನು ಕಡಿಯುವುದು ಸಹ ಉಳಿಯುತ್ತದೆ. ಜೊತೆಗೆ 4 ಕಿ.ಮೀ ಅಂತರ ಸಹ ಕಡಿಮೆಯಾಗುತ್ತದೆ ಅಂತಾರೆ ಸ್ಥಳೀಯರು.
ಒಟ್ಟಾರೆಯಾಗಿ ಈಗಾಗಲೇ ಈ ಗ್ರಾಮಗಳ ಜನರು ಭದ್ರಾ ಹಿನ್ನಿರಿನಲ್ಲಿ ತಮ್ಮ ಹಳ್ಳಿಗಳನ್ನ ಕಳೆದುಕೊಂಡು ಒಮ್ಮೆ ನಿರಾಶ್ರಿತರಾಗಿದ್ದಾರೆ. ಜೊತೆಗೆ ಮತ್ತೆ ಈ ಜನರನ್ನು ನಿರಾಶ್ರಿರನ್ನಾಗಿ ಮಾಡುವ ಇಲಾಖೆಯ ಕ್ರಮ ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆಯಾಗಿದ್ದು, ಇಲಾಖೆ ಇಷ್ಟೆಲ್ಲಾ ಉಪಯೋಗವಿದ್ರೆ ಸ್ಥಳೀಯರು ಸೂಚಿಸುವ ಬದಲಿ ಮಾರ್ಗ ಅನುಸರಿಸಲಿ ಎಂಬುದು ಎಲ್ಲರ ಆಶಯ.