ಕೆಆರ್ ನಗರ: ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆಮಾಡಿ ಎಸೆದು ಹೋಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಶ್ರೀರಾಮಪುರ ಗ್ರಾಮ ಸಮೀಪದ ಚಾಮರಾಜ ಬಲದಂಡೆ ನಾಲೆಯ ಏರಿಯ ಮೇಲೆ ನಡೆದಿದೆ.
ಚುಂಚನಕಟ್ಟೆ ಗ್ರಾಮದ ಲೇಟ್ ನಾಗಸುಬ್ಬಯ್ಯ ಅವರ ಪುತ್ರ ರಾಜು (45) ಕೊಲೆಯಾದವನು. ಈತ ಗ್ರಾಮದ ಕಾವೇರಿ ಹೋಟೆಲ್ ನಲ್ಲಿ ಸಪ್ಲಯರ್ ಮತ್ತು ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಶವದ ಬಳಿ ಕಲ್ಲು ಮತ್ತು ದೊಣ್ಣೆಗಳು ಹಾಗೂ ಮೈಮೇಲೆ ಹಾಕಲಾಗಿದ್ದ ಪಂಚೆ ಮತ್ತು ಅಂಗಿ ಅನತಿ ದೂರದಲ್ಲಿ ಬಿದ್ದಿದ್ದು, ಮೈಯ್ಯಲ್ಲಿ ರಕ್ತದ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಯಾರೋ ದುಷ್ಕರ್ಮಿಗಳು ಇಲ್ಲಿಗೆ ಕರೆತಂದು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಶ್ರೀರಾಮಪುರ ಗ್ರಾಮದ ಸಮೀಪದ ಕೃಷ್ಣೇಗೌಡರ ಜಮೀನಿನ ಬಳಿ ನಾಲೆಯ ಏರಿಯ ಮೇಲೆ ವ್ಯಕ್ತಿಯೋರ್ವನ ಶವಬಿದ್ದಿರುವ ಬಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮೈಸೂರು ಗ್ರಾಮಾಂತರ ಡಿವೈಎಸ್ಪಿ ವಿಕ್ರಮ್ ಅಮಾಟೆ, ವೃತ್ತ ನಿರೀಕ್ಷಕ ಬಸವರಾಜು. ಪಿಎಸ್ಐಗಳಾದ ಬೋರಶೆಟ್ಟಿ, ಶ್ರೀಕಾಂತ್, ಮಹೇಶ್, ಚುಂಚನಕಟ್ಟೆ ಠಾಣಾಧಿಕಾರಿ ಸೋಮಶೇಖರ್, ಸಿಬ್ಬಂದಿ ಅರವಿಂದ, ಯೋಗಿಶ್, ಜಡೆಸ್ವಾಮಿ, ಶ್ರೀಕಂಠ, ರಾಮಚಂದ್ರೇಗೌಡ ಮತ್ತು ಶ್ವಾನದಳ, ಬೆರಳಚ್ಚು ತಜ್ಞರು ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಕೊಲೆಯಾದವನು ರಾಜು ಎಂಬುದಾಗಿ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ನಗರ ಠಾಣೆ ಪೊಲೀಸರು ತನಿಖೆ ಆರಂಭಗೊಳಿಸಿದ್ದು, ಹತೈಗೈದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.