ಚಾಮರಾಜನಗರ: ಕೊಳ್ಳೇಗಾಲದ ಭೀಮನಗರದ ಅಂಬೇಡ್ಕರ್ ಸ್ವಾಗತ ಕಮಾನಿಗೆ ಚಪ್ಪಲಿಹಾರ ಹಾಕಿ ಅಪಮಾನ ಮಾಡಿ ತಾಲೂಕಿನಾದ್ಯಂತ ಶಾಂತಿಗೆ ಭಂಗ ತಂದ ಪ್ರಕರಣದ ಪ್ರಮುಖ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭೀಮನಗರದ ಕಲ್ಲುಬಾವಿ ನಿವಾಸಿ ಹಾಲಿ ಆಶ್ರಯ ಬಡಾವಣೆಯಲ್ಲಿರುವ ಸ್ಯಾಮುಯಲ್ ಅವರ ಪುತ್ರ ಪೇಂಟರ್ ಸ್ಟಾಲೀನ್(27), ಭೀಮನಗರ ಪನ್ನಾಬಿದಿಯ ಬಸವರಾಜು ಪುತ್ರ ಶರತ್ಕುಮಾರ್ ಅಲಿಯಾಸ್ ಶರತ್(21), ಭೀಮನಗರದ ಕಲ್ಲುಬಾವಿ ನಿವಾಸಿ ಶಿವಮೂರ್ತಿ ಅವರ ಪುತ್ರ ಆಟೋಚಾಲಕ ಶಿವಸ್ವಾಮಿ ಅಲಿಯಾಸ್ ಶಿವು(22), ಲಕ್ಕರಸನಪಾಳ್ಯದ ನಿವಾಸಿ ಹಾಲಿ ಬಸ್ತಿಪುರ ರಸ್ತೆ ನಿವಾಸಿ ದಿವಂಗತ ಲಿಂಗರಾಜು ಪುತ್ರ ಅನಿಲ್ ಕುಮಾರ್ ಅಲಿಯಾಸ್ ಅನಿಲ್(21), ಭೀಮನಗರದ ಕಲ್ಲುಬಾವಿ ನಿವಾಸಿ ದೊಡ್ಡಲಿಂಗಯ್ಯ ಅವರ ಪುತ್ರ ಚಾಲಕ ನವೀನ ಅಲಿಯಾಸ್ ಪಿಂಕಾ(29) ಎಂಬುವರು ಬಂಧಿತರು. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಇವರು ಜನವರಿ 13ರಂದು ಸ್ವಾಗತ ಕಮಾನಿಗೆ ಚಪ್ಪಲಿ ಹಾರ ಸಿಕ್ಕಿಸಿದ್ದರು ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕೊಳ್ಳೇಗಾಲ, ಹನೂರು ಸೇರಿದಂತೆ ಹಲವೆಡೆ ರಸ್ತೆ ತಡೆದು ಪ್ರತಿಭಟನೆಗಳು ನಡೆದಿದ್ದವು. ಕೆಲವರು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಎಸ್ಪಿ ಕುಲ್ದೀಪ್ ಕುಮಾರ್ ಆರ್. ಜೈನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು.
ತನಿಖಾ ತಂಡಕ್ಕೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಸ್ಟಾಲಿನ್ ನನ್ನು ಫೆ.1ರಂದು ವಶಕ್ಕೆ ಪಡೆದು ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆಗೊಳಪಡಿಸಿದಾಗ ನಿಜ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ, ಮೊದಲ ತಂಡದಲ್ಲಿ ಕೊಳ್ಳೇಗಾಲ ಸಿಪಿಐ ಅಮರನಾರಾಯಣ, ಸಿಬ್ಬಂದಿ ವಿರೇಂದ್ರ, ಚಿನ್ನಪ್ಪ, ಸುರೇಶ್ ಬಾಬು, ಸತ್ಯನಾರಾಯಣರಾಜೇ ಅರಸು, ಮಹದೇವ ಪ್ರಸಾದ್, ಅನಿಲ್ ಕುಮಾರ್, ನೂರ್ ಫರೀಜ್, ಎರಡನೇ ತಂಡದಲ್ಲಿ ಕೊಳ್ಳೇಗಾಲ ಪಟ್ಟಣ ಠಾಣೆಯ ಪಿಎಸ್ಐ ಎಂ. ನಾಯಕ್, ಸಿಬ್ಬಂದಿ ಉಮೇಶ, ರಘು, ಜಡೇಸ್ವಾಮಿ. ಶ್ರೀನಿವಾಸ, ನಾಗರಾಜು, ಜಯಪ್ಪ, ಮೂರನೇ ತಂಡದಲ್ಲಿ ಯಳಂದೂರು ಪೊಲೀಸ್ ಠಾಣೆಯ ಪಿಎಸ್ಐ ಮಂಜು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಮತ್ತು ವನರಾಜು, ಸಿಬ್ಬಂದಿ ಗೋವಿಂದ ನಾಗೇಶ, ರವಿ, ರಾಮಚಂದ್ರ, ಸೂರ್ಯಪ್ರಕಾಶ್, ಮಹಿಳಾ ಮುಖ್ಯಪೇದೆ ವಸಂತ ಮೊದಲಾದವರು ಭಾಗವಹಿಸಿದ್ದರು.