ಹಾಸನ: ಜಮ್ಮು ಕಾಶ್ಮೀರದ ಗುರೇಜ್ ನಲ್ಲಿ ಹಿಮಪಾತದಿಂದ ಹುತಾತ್ಮರಾದ ಯೋಧ ಸಂದೀಪ್ ಶೆಟ್ಟಿ ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮ ದೇವಿಹಳ್ಳಿಯಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನೆರವೇರಿತು. ವೀರ ಯೋಧ ಸಂದೀಪ್ ಅಮರ್ ರಹೇ ಎನ್ನುವ ಘೋಷಣೆಯೊಂದಿಗೆ ಸಾವಿರಾರು ಮಂದಿ ಹುತಾತ್ಮ ಯೋಧನಿಗೆ ಕಂಬನಿ ಮಿಡಿದು ಗೌರವ ಸಲ್ಲಿಸಿದರು.
ಮಂಗಳವಾರ ತಡರಾತ್ರಿ ಜಿಲ್ಲೆಗೆ ಆಗಮಿಸಿದ ಹುತಾತ್ಮ ಸಂದೀಪ್ ಶೆಟ್ಟಿಯವರ ಪಾರ್ಥಿವ ಶರೀರವನ್ನು ನಗರದ ಜಿಲ್ಲಾ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಬುಧವಾರ ಬೆಳಿಗ್ಗೆ ಸಂದೀಪ್ ಶೆಟ್ಟಿಯವರ ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜ್, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಶಾಸಕರಾದ ಹೆಚ್.ಎಸ್.ಪ್ರಕಾಶ್, ಹೆಚ್.ಕೆ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷರಾದ ಡಾ. ಹೆಚ್.ಎಸ್.ಅನಿಲ್ ಕುಮಾರ್, ಹುಡಾ ಅಧ್ಯಕ್ಷರಾದ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ವಿ.ಚೈತ್ರ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಉಪವಿಭಾಗಾಧಿಕಾರಿ ಡಾ:ಹೆಚ್.ಎಲ್. ನಾಗರಾಜ್, ರಾಜ್ಯಸಭಾ ಮಾಜಿ ಸದಸ್ಯರಾದ ಹೆಚ್.ಕೆ.ಜವರೇಗೌಡರು ಮತ್ತಿತರರು ಗೌರವ ನಮನ ಸಲ್ಲಿಸಿದರು.
ಬೆಳಿಗ್ಗೆಯಿಂದಲೇ ಕಿಕ್ಕಿರಿದು ತುಂಬಿದ್ದ ಜನ ಸರತಿ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತಿಮ ದರ್ಶನ ಪಡೆದರು. ಆ ನಂತರ ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ನಡೆಸಿ ಹುಟ್ಟೂರು ದೇವಿಹಳ್ಳಿಗೆ ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ಸಾವಿರಾರು ಜನರು ನೆರೆದು ಸಂದೀಪ್ ಶೆಟ್ಟಿ ಅಮರ್ ರಹೇ ಎಂಬ ಘೋಷಣೆ ಕೂಗುತ್ತಾ ಗೌರವ ಸಮರ್ಪಣೆ ಮಾಡಿದರು. ಹುಟ್ಟೂರು ದೇವಿಹಳ್ಳಿಯಲ್ಲಿ ಹುತಾತ್ಮ ಸಂದೀಪ್ ಶೆಟ್ಟಿಯವರ ಅಂತ್ಯಕ್ರಿಯೆ ನಡೆಸುವ ಸಂದರ್ಭ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಸೇನಾ ಪಡೆ ಪರವಾಗಿ ಆರ್ಮಿ ಸರ್ವೀಸ್ ಕೋಡ್ ರೆಜಿಮೆಂಟ್ ನ ಬ್ರಿಗೇಡಿಯೆರ್ ಸಿ.ಕೆ.ರಮೇಶ್, ಮೇಜರ್ ಕುನಾರ್ ಕೋಲಿ, ಸುಬೇದಾರ್ಗಳಾದ ಜಿ ಶರತ್, ಹಾಗೂ ಡಿ.ಕೆ.ಕುಸ್ಹಾ ಗೌರವ ವಂದನೆ ಸಲ್ಲಿಸಿದರು.
ಅಲ್ಲದೆ ಮೂರು ಸುತ್ತುಗಳ ಕುಶಾಲ ತೋಪು ಹಾರಿಸಿ ಸೇನಾ ಗೌರವ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜು, ಶಾಸಕರಾದ ಹೆಚ್.ಎಸ್.ಪ್ರಕಾಶ್, ಜಿಲ್ಲಾಧಿಕಾರಿ ವಿ. ಚೈತ್ರ, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಮತ್ತು ಲಕ್ಷ್ಮಿನಾರಾಯಣ, ಮತ್ತಿತರರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.