ಮಡಿಕೇರಿ: ನಗರದ ಹೊರ ವಲಯದ ಕರ್ಣಂಗೇರಿ ವ್ಯಾಪ್ತಿಯಲ್ಲಿ ಸುಮಾರು 5 ಏಕರೆ ಪ್ರದೇಶದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಭವನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಒಟ್ಟು 18.25 ಕೋಟಿ ವೆಚ್ಚದ ಕಛೇರಿ ಸಂಕೀರ್ಣ ಕಾಮಗಾರಿ ಮುಂದಿನ ವರ್ಷ ಪೂರ್ಣಗೊಳ್ಳಲಿದೆ.
ಕಳೆದ ಅನೇಕ ವರ್ಷಗಳಿಂದ ಕೋಟೆ ಆವರಣದಲ್ಲಿ ಹಾಗೂ ವಿವಿಧ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯ್ತಿಯ ಸುಮಾರು 29 ಇಲಾಖಾ ಕಛೇರಿಗಳು ನಗರದಿಂದ ಅಂದಾಜು 5 ಕಿ.ಮೀ. ದೂರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಪಂಚಾಯ್ತಿ ಭವನಕ್ಕೆ 2018 ರಲ್ಲಿ ಸ್ಥಳಾಂತರಗೊಳ್ಳಲಿದೆ. ಕರ್ಣಂಗೇರಿ ವ್ಯಾಪ್ತಿಯ ಹಸಿರ ಪರಿಸರದ ನಡುವೆ 5 ಏಕರೆ ಪ್ರದೇಶದಲ್ಲಿ ಈಗಾಗಲೆ ನೆಲ ಅಂತಸ್ತು ಸೇರಿದಂತೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. 2016 ಡಿ.19 ರಿಂದ ಕಾಮಗಾರಿಯನ್ನು ಆರಂಭಿಸಲಾಗಿದ್ದು, ನೆಲ ಅಂತಸ್ತಿನ ಕಾಮಗಾರಿ ಭರದಿಂದ ಸಾಗಿದೆ. 16.27 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ನಡೆದಿತ್ತಾದರು ಹೆಚ್ಚುವರಿ ಖರ್ಚು ವೆಚ್ಚಗಳನ್ನು ಸರಿದೂಗಿಸಲು 18.25 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ ಗೃಹ ಮಂಡಳಿ ಮೂಲಕ ಬೆಂಗಳೂರಿನ ಗಾದಿ ರಾಜು ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಗುತ್ತಿಗೆಯನ್ನು ಪಡೆದಿದ್ದು, ಉಡುಪಿಯ ಎ.ಜಿ. ಅಸೋಸಿಯೇಟ್ಸ್ ಕಟ್ಟಡ ವಿನ್ಯಾಸ ಮಾಡಿದೆ. ಕಾಮಗಾರಿಯ ಅವಧಿ 18 ತಿಂಗಳಾಗಿದ್ದು, 2018 ಜೂ.18 ಕ್ಕೆ ನೂತನ ಜಿಲ್ಲಾ ಪಂಚಾಯ್ತಿ ಕಛೇರಿ ಸಂಕೀರ್ಣವನ್ನು ಗುತ್ತಿಗೆದಾರರು ಕೊಡಗು ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರಿಸಬೇಕಾಗಿದೆ. ನೂತನ ಭವನದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಉಪ ಕಾರ್ಯದರ್ಶಿಗಳು, ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕಛೇರಿ ಸೇರಿದಂತೆ ಜಿ.ಪಂ ಸಭಾಂಗಣ ಹಾಗೂ ವಿವಿಧ ಇಂಜಿನಿಯರಿಂಗ್ ಇಲಾಖೆಗಳು, ಯೋಜನಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಸೇರಿದಂತೆ 29 ಇಲಾಖೆಗಳ ಕಛೇರಿಗಳು ಕಾರ್ಯ ನಿರ್ವಹಿಸಲಿವೆ.
ಗ್ರಾಮೀಣರಿಗೆ ದುಬಾರಿಯಾಗಲಿರುವ ಪ್ರಯಾಣ ವೆಚ್ಚ:
ಪ್ರಸ್ತುತ ಜಿಲ್ಲಾ ಪಂಚಾಯ್ತಿಗೆ ಸಂಬಂಧಿಸಿದ ವಿವಿಧ ಕಛೇರಿಗಳು ನಗರದ ವಿವಿಧೆಡೆ ಚದುರಿದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿತ್ತು. ಆದರೆ, ನೂತನ ಭವನದಲ್ಲಿ ಎಲ್ಲಾ ಕಛೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವುದರಿಂದ ಗ್ರಾಮೀಣ ಜನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಆದರೆ, 5 ಕಿ.ಮೀ. ದೂರದಲ್ಲಿ ಜಿಲ್ಲಾ ಪಂಚಾಯತ್ ಭವನ ನಿರ್ಮಾಣಗೊಳ್ಳುತ್ತಿರುವುದರಿಂದ ಇಲ್ಲಿಗೆ ಆಗಮಿಸಲು ಗ್ರಾಮಸ್ಥರು ದುಬಾರಿ ಪ್ರಯಾಣ ವೆಚ್ಚವನ್ನು ಭರಿಸಬೇಕಾಗುತ್ತದೆ. ನಗರ ವ್ಯಾಪ್ತಿಯ ವಿಸ್ತರಣೆಯ ದೃಷ್ಟಿಯಿಂದ ಮತ್ತು ನಗರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿ.ಪಂ ಭವನ ನಗರದ ಹೊರ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವುದನ್ನು ನಗರದ ಜನತೆ ಸ್ವಾಗತಿಸಿದ್ದಾರೆ. ಆದರೆ, ಗ್ರಾಮೀಣ ಜನರು ಕೊಂಚ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಕಾಮಗಾರಿ:
ಕಾಮಗಾರಿ ಕುರಿತು ಪ್ರತಿಕ್ರಿಯೆ ನೀಡಿರುವ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಕಛೇರಿ ಸಂಕೀರ್ಣದ ನೂತನ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶವನ್ನು ನೀಡಲಾಗಿದೆಯಾದರು 2 ವರ್ಷಗಳಲ್ಲಿ ಜಿ.ಪಂ ನ ಎಲ್ಲಾ ಕಛೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಅವರು ತಿಳಿಸಿದರು.
ಅತಿಕ್ರಮಣ ತೆರವಿನ ಬಳಿಕ ಬಿರುಸುಗೊಂಡ ಕಾಮಗಾರಿ:
ಜಿ.ಪಂ ನ ನೂತನ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾಗಿದ್ದ ಪ್ರದೇಶದಲ್ಲಿ ಕೆಲವು ಮನೆಗಳು ಅಕ್ರಮವಾಗಿ ನಿರ್ಮಾಣಗೊಂಡಿದ್ದವು. ಆದರೆ ತ್ವರಿತವಾಗಿ ಜಿ.ಪಂ ಕಟ್ಟಡ ಕಾಮಗಾರಿ ಆರಂಭವಾಗಬೇಕಾಗಿದ್ದ ಕಾರಣ 2016 ಜನವರಿ ತಿಂಗಳಿನ ಸಂಕ್ರಾಂತಿ ದಿನದಂದು ಜಿಲ್ಲಾಡಳಿತ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಕೆಲವರ ಅಸಮಾಧಾನಕ್ಕೂ ಗುರಿಯಾಗಿತ್ತು. ಇದೀಗ ಜಿ.ಪಂ ಭವನದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಉದ್ದೇಶಿತ ಯೋಜನೆ ಪ್ರಗತಿಯಲ್ಲಿರುವುದರಿಂದ ಸಾರ್ವಜನಿಕರು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಖಾಲಿಯಾಗಲಿದೆ ಕೋಟೆ ಆವರಣ:
ಇಷ್ಟರವರೆಗೆ ಜಿ.ಪಂ ಕಛೇರಿಗಳಿಂದ ಚಟುವಟಿಕೆಯ ಕೇಂದ್ರವಾಗಿದ್ದ ಕೋಟೆಯ ಆವರಣ 2018ರ ನಂತರ ಕಛೇರಿಗಳಿಲ್ಲದೆ, ಬಿಕೋ ಎನ್ನುವ ಸಾಧ್ಯತೆಗಳಿದೆ. ಜಿಲ್ಲಾಡಳಿತ ಅಥವಾ ಪ್ರಾಚ್ಯ ವಸ್ತು ಇಲಾಖೆ ಕೋಟೆ ಕಟ್ಟಡ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಕಛೇರಿಗಳಿಲ್ಲದ ಪುರಾತನ ಕಟ್ಟಡ ಕಳೆಗುಂದುವ ಮತ್ತು ಶಿಥಿಲಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.