ಚಾಮರಾಜನಗರ: ರಥ ಸಪ್ತಮಿಯ ಅಂಗವಾಗಿ ಗುಂಡ್ಲುಪೇಟೆಯ ಶ್ರೀ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಎಸ್.ಜಾನಕಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ರಥೋತ್ಸವ ನಡೆದ ನಂತರ ರಾತ್ರಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಸುಪ್ರಸಿದ್ದ ಗಾಯಕಿ ಎಸ್.ಜಾನಕಿಯವರು ಭಾಗವಹಿಸಿ ಪಟ್ಟಣದ ಅಭಿಮಾನಿಗಳ ಜೊತೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ನಂತರ ತಮ್ಮ ಕುಟುಂಬದ ಹಿತೈಷಿ ಪರಶಿವ ಹಾಗೂ ನಳಿನಿಯವರ ಮನೆಯಲ್ಲಿ ಉಳಿದಿದ್ದರು. ಪ್ರತಿ ವರ್ಷವೂ ತಪ್ಪದೆ ಜಾನಕಿಯವರು ಯಾವುದಾದರೂ ಒಂದು ಸಂದರ್ಭದಲ್ಲಿ ಪಟ್ಟಣಕ್ಕೆ ಭೇಟಿ ನೀಡಿ ಒಂದು ದಿನ ಉಳಿದು ಹಿತೈಷಿಗಳ ಜೊತೆ ಮಾತನಾಡಿ ಮರುದಿನ ಮರಳುವುದು ಸಾಮಾನ್ಯವಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಶಂಕರನಾರಾಯಣ ಜೋಯಿಸ, ರಘುಪತಿ ಅಯ್ಯಂಗಾರ್, ಭಾಷ್ಯಂ, ವರದರಾಜಭಟ್ಟರು, ವೆಂಕಟಪತಿ ಭಟ್ಟ, ಶೇಷಾದ್ರಿ ಅಯ್ಯಂಗಾರ್, ಪುರಸಭೆ ಸದಸ್ಯ ಎನ್.ಗೋವಿಂದರಾಜನ್, ಭಜನಾಮಂಡಲಿಯ ಕವಿತಾ, ಶೋಭಾ, ಸುಗುಣಾಂಬಾ ಹಾಗೂ ಇತರರು ಹಾಜರಿದ್ದರು.