ಮಡಿಕೇರಿ: ರಾಜ್ಯ ಸರ್ಕಾರ ಲಾಟರಿ ಟಿಕೆಟ್ ಗಳನ್ನು ನಿಷೇಧ ಮಾಡಿದ್ದರೂ ಕೆಲವು ಸಂಘ-ಸಂಸ್ಥೆಗಳು ಕಾರ್ಯಕ್ರಮಗಳ ನಿಮಿತ್ತ ಖಾಸಗಿಯಾಗಿ ಲಕ್ಕಿಡಿಪ್ ಗಳನ್ನು ನಡೆಸುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಇದೇ ರೀತಿ ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಲಕ್ಕಿಡಿಪ್ ಮಾಡಿ ಇದೀಗ ಇಕ್ಕಟ್ಟಿಗೆ ಸಿಲುಕಿರುವ ಘಟನೆ ಇತ್ತೀಚೆಗೆ ನಡೆದಿದೆ.
ಗಣರಾಜ್ಯೋತ್ಸವದ ಅಂಗವಾಗಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಡ್ಯಾನ್ಸ್ ಮೇಳ ಏರ್ಪಡಿಸಿತ್ತು. ಕಾರ್ಯಕ್ರಮದ ಸಹಾಯಾರ್ಥ ಲಕ್ಕಿ ಡಿಪ್ ನಡೆಸಿತ್ತು. ಈ ಸಂಬಂಧ ಸಾವಿರಾರು ಟಿಕೆಟ್ ಗಳನ್ನು ಮುದ್ರಿಸಿತ್ತಲ್ಲದೆ, ಪ್ರಥಮ ಬಹುಮಾನವಾಗಿ ಹೋಂಡಾ ಡಿಯೋ, ದ್ವಿತೀಯ ರೆಫ್ರಜಿರೇಟರ್, ತೃತೀಯ 4ಗ್ರಾಂ ಚಿನ್ನ ಮತ್ತು ಆರು ಸಮಾಧಾನಕರ ಬಹುಮಾನಗಳನ್ನಿಟ್ಟು, ಪ್ರತಿ ಟಿಕೆಟ್ ಗೆ 20 ರೂ.ನಂತೆ ಮಾರಾಟ ಮಾಡಲಾಗಿತ್ತು.
ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭ ಸಂಘದಿಂದ ಕಾರ್ಯಕ್ರಮ ನಡೆಸಿ ನೆರೆದ ಗಣ್ಯರ ಸಮ್ಮುಖದಲ್ಲೇ ಲಾಟರಿ ಡ್ರಾ ಮಾಡಲಾಗಿತ್ತು. ಬಹುಮಾನ ಪಡೆದವರು ಟಿಕೆಟ್ ಗಳನ್ನು ಸಂಘಕ್ಕೆ ನೀಡಿ ಬಹುಮಾನ ಪಡೆಯುವಂತೆ ಕೋರಲಾಗಿತ್ತು.
ಪ್ರಥಮ ಬಹುಮಾನ 22589 ಸಂಖ್ಯೆ ಹೊಂದಿದ್ದ ಲಾಟರಿ ಟಿಕೆಟ್ ಗೆ ಬಂದಿತ್ತು. ಅದರಂತೆ ಮಾರನೆಯ ದಿನವೇ ಸೋಮವಾರಪೇಟೆ ನಿವಾಸಿ ಶ್ರೀಧರ್ ಎಂಬುವರು ಟಿಕೆಟ್ ಅನ್ನು ಸಂಘಕ್ಕೆ ನೀಡಿ ಸ್ಕೂಟರ್ ನ್ನು ಪಡೆದುಕೊಂಡು ಹೋಗಿದ್ದರು. ಆದರೆ ಅದು ಅಲ್ಲಿಗೆ ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಅದರ ಮಾರನೆಯ ದಿನ ಸೋಮವಾರಪೇಟೆ ಬಳಿಯ ಗರಗಂದೂರು ಗ್ರಾಮದ ರಾಜಪ್ರಭ ಎಸ್ಟೇಟ್ ನ ಕಾರ್ಮಿಕ ಮಾಡಸ್ವಾಮಿ ಆಗಮಿಸಿ ಅದೇ ಸಂಖ್ಯೆ ನೀಡಿ ಬಹುಮಾನ ನೀಡುವಂತೆ ಕೇಳಿದ್ದಾರೆ. ಆಗಲೇ ಸಂಘದ ಪದಾಧಿಕಾರಿಗಳಿಗೆ ಏನೋ ಎಡವಟ್ಟಾಗಿದೆ ಎಂಬುದು ಬೆಳಕಿಗೆ ಬಂದಿತ್ತು.
ಇದೀಗ ಬೇರೆ ದಾರಿ ಕಾಣದೆ ಆಟೋ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ 30 ದಿನದೊಳಗೆ ಮಾಡಸ್ವಾಮಿ ಅವರಿಗೆ ಸ್ಕೂಟರ್ ನೀಡುವಂತೆ ತೀರ್ಮಾನಿಸಿದ್ದಾರೆ. ಆಗಿರುವ ಎಡವಟ್ಟಿಗೆ ಸಂಘದೊಳಗೆ ವಾಗ್ವಾದಗಳು ನಡೆದಿವೆ. ಲಾಟರಿ ನಿಷೇಧಿಸಿದ್ದರೂ ಸಂಘ ಲಕ್ಕಿಡಿಪ್ ನಡೆಸಿದದ್ದು, ಚರ್ಚೆಗೆ ಗ್ರಾಸವಾಗಿದೆ.