ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಕಣಿವೆಯ ಶ್ರೀಹರಿಹರೇಶ್ವರ ದೇಗುಲವಿರುವ ರಾಂಪುರ ಗ್ರಾಮ ವ್ಯಾಪ್ತಿಯಲ್ಲಿ ಕಾಯ್ದೆ, ಕಾನೂನುಗಳನ್ನು ಮೀರಿ ಜಿಲ್ಲಾಡಳಿತ ದಿಡ್ಡಳ್ಳಿ ಗಿರಿಜನರಿಗೆ ಹತ್ತು ಏಕರೆ ಜಾಗವನ್ನು ಪುನರ್ವಸತಿಗಾಗಿ ಗುರುತಿಸಿದೆ ಎಂದು ಆರೋಪಿಸಿರುವ ಕುಶಾಲನಗರದ ಹಿರಿಯ ವಕೀಲ ಆರ್.ಕೆ.ನಾಗೇಂದ್ರಬಾಬು, ಮುಗ್ದ ಗಿರಿಜನರನ್ನು ವಂಚಿಸುವ ಯೋಜನೆಯನ್ನು ಜಿಲ್ಲಾಡಳಿತ ಕೈಬಿಡದಿದ್ದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠಕ್ಕೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಿವೆ ಎನ್ನುವ ಗ್ರಾಮ ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಕ್ಷೇತ್ರವಾಗಿರುವುದಲ್ಲದೆ, ಹರಿಹರೇಶ್ವರ, ಲಕ್ಷ್ಮಣೇಶ್ವರ ಮತ್ತು ರಾಮಲಿಂಗೇಶ್ವರ ಎನ್ನುವ ಪುರಾಣ ಪ್ರಸಿದ್ಧವಾದ ದೇಗುಲಗಳಿವೆ. ದೇಗುಲದ ಸ್ವಲ್ಪ ದೂರದಲ್ಲೆ ಹರಿದು ಹೋಗುವ ಕಾವೇರಿ ನದಿಯ ಅನತಿ ದೂರದ ಬೆಟ್ಟದ ತಪ್ಪಲಿನಲ್ಲಿ ಜಿಲ್ಲಾಡಳಿತ ಕಾನೂನಿನ ಮಿತಿಗಳನ್ನು ಮೀರಿ ರಾಂಪುರ ಗ್ರಾಮದ ಸರ್ವೇ ಸಂಖ್ಯೆ 1/1 ರಲ್ಲಿ ಗಿರಿಜನ ಪುನರ್ವಸತಿಗೆ ಜಾಗವನ್ನು ಗುರುತಿಸಿದೆ.
ಕರ್ನಾಟಕ ನೀರಾವರಿ ಕಾಯ್ದೆ 1965 ರ ನಿಯಮಾವಳಿ 23 ರಂತೆ ಯಾವುದೇ ನದಿ, ಕಾಲುವೆ, ಕೆರೆ, ಇವುಗಳ ದಂಡೆಯಲ್ಲಿ ವಾಹನಗಳು,ಮನುಷ್ಯ ಸಂಚಾರವನ್ನು ನಿಷೇಧಿಸಲಾಗುತ್ತದೆ. ಈ ವಿಚಾರಗಳ ಬಗ್ಗೆ ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತ ಜಾಣ ಕರುಡನ್ನು ಪ್ರದರ್ಶಿಸಿದೆ. ಪ್ರಸ್ತುತ ಗುರುತಿಸಿರುವ ಪ್ರದೇಶದ ಆಸುಪಾಸಿನಲ್ಲೆ ದೇವಸ್ಥಾನ, ಕಾವೇರಿ ನದಿ ಹಾಗೂ 1972 ರಲ್ಲಿ ನಿರ್ಮಾಣವಾಗಿರುವ ಹಾರಂಗಿ ನೀರನ್ನು ಹರಿಸುವ ಆಕ್ವಾಡಕ್ಟ್ ಇದೆ. ಹೀಗಿದ್ದು ಗಿರಿಜನರಿಗೆ ವಸತಿ ಒದಗಿಸಲು ಜಾಗ ಗುರುತಿಸಿ ದಿಡ್ಡಳ್ಳಿ ಗಿರಿಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ನಾಗೇಂದ್ರ ಬಾಬು ಆರೋಪಿಸಿದರು.
ಕರ್ನಾಟಕ ಪ್ರಾಚ್ಯ ಕಟ್ಟಡಗಳ ಮತ್ತು ವಸ್ತುಗಳ ಸಂರಕ್ಷಣಾ ಕಾಯ್ದೆಯನ್ವಯ ಪಾರಂಪರಿಕ ಕಟ್ಟಡ, ದೇವಸ್ಥಾನಗಳಿಂದ 100 ಮೀ. ಒಳಗೆ ಪೂರ್ವಾನುಮತಿ ಇಲ್ಲದೆ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವಂತಿಲ್ಲ. ಇದರೊಂದಿಗೆ ಕರ್ನಾಟಕ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ 500 ಮೀಟರ್ ಅಂತರದಲ್ಲಿ ಕೇವಲ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆ ಹೊರತು ಪಡಿಸಿದಂತೆ ಯಾವುದೇ ವಸತಿ, ಕಟ್ಟಡ ನಿರ್ಮಾಣ ಕಾರ್ಯ, ಕೈಗಾರಿಕೆಗಳಿಗೆ ಅವಕಾಶವಿಲ್ಲ. ಆದರೆ, ಕಣಿವೆ ದೇವಸ್ಥಾನದಿಂದ 200 ಅಡಿ ಹಾಗೂ ಹಾರಂಗಿ ಮೇಲ್ಗಾಲುವೆಯ 50 ಅಡಿ ಅಂತರದಲ್ಲಿ ಗಿರಿಜನರಿಗೆ ನಿವೇಶನ ನೀಡುವ ಪ್ರಯತ್ನ ನಡೆದಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದರು.
ಜಿಲ್ಲಾಡಲಿತ ಗುರುತಿಸಿರುವ ಜಾಗದಲ್ಲಿ ದಿಡ್ಡಳ್ಳಿಯ 165 ಗಿರಿಜನ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಿ ಅವರಿಗೆ ಪುನರ್ವಸತಿ ಕಲ್ಪಿಸಿದಲ್ಲಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೆೇರವಾಗಿ ಕಾವೇರಿ ನದಿಯನ್ನು ಸೇರುವ ಮೂಲಕ ನೀರು ಕಲುಷಿತಗೊಳ್ಳಲಿದೆ ಎಂದು ನಾಗೇಂದ್ರ ಬಾಬು ಆತಂಕ ವ್ಯಕ್ತಪಡಿಸಿದರು.
‘ನವಿಲು’ ಆವಾಸ ಸ್ಥಾನಕ್ಕೆ ಧಕ್ಕೆ: ಪ್ರಸ್ತುತ ಗಿರಿಜನ ಕುಟುಂಬಗಳಿಗೆ ಗುರುತಿಸಲಾಗಿರುವ ಕಣಿವೆಯ ಹರಿಹರೇಶ್ವರ ದೇವಸ್ಥಾನ ಬಳಿಯ ಜಾಗ ಸೇರಿದಂತೆ ಚಿಕ್ಕಳುವಾರ, ಹೆಗ್ಗಡೆಹಳ್ಳಿ ಪ್ರದೇಶಗಳು ನವಿಲಿನ ಆವಾಸ ಸ್ಥಾನವಾಗಿದೆ. ಗಿರಿಜನ ಕುಟುಂಬಗಳಿಗೆ ಬೆಟ್ಟದ ತಪ್ಪಲಿನಲ್ಲಿ ಹಸಿರ ಪರಿಸರವನ್ನು ನಾಶ ಮಾಡಿ, ಜಾಗ ಸಮತಟ್ಟು ಗೊಳಿಸಿದ್ದಲ್ಲಿ ವನ್ಯಜೀವಿ ನವಿಲಿನ ಆವಾಸ ಸ್ಥಾನಕ್ಕೆ ಧಕ್ಕೆಯಾಗಲಿದೆ. ಕಣಿವೆ ಸಮೀಪದ ರಾಂಪುರ ಗ್ರಾಮ ಹಾರಂಗಿಯ ಮುಳುಗಡೆ ಪ್ರದೇಶವೆಂದು ಪರಿಗಣಿತವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ನಿವೇಶನಗಳನ್ನು ಒದಗಿಸಲು ಅವಕಾಶವಿಲ್ಲ. ಹೀಗಿದ್ದೂ ಈ ಪ್ರದೇಶದಲ್ಲಿ ನಿವೇಶನ ಒದಗಿಸಲು ಮುಂದಾಗುವ ಮೂಲಕ ಮುಗ್ದ ಗಿರಿಜನರನ್ನು ದಾರಿತಪ್ಪಿಸುವ ಪ್ರಯತ್ನ ನಡೆದಿದ್ದು, ಈ ಬಗ್ಗೆ ಗಿರಿಜನರು ಜಾಗೃತರಾಗಬೇಕೆಂದು ನಾಗೇಂದ್ರ ಬಾಬು ತಿಳಿಸಿದರು.
ಜಿಲ್ಲಾಡಳಿತ ತನ್ನ ಪ್ರಯತ್ನದಿಂದ ಹಿಂದೆ ಸರಿಯದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು.