ಮಡಿಕೇರಿ: ಕೊಡಗಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಎರಡು ಗಸ್ತು ವಾಹನಗಳನ್ನು ನೀಡಲಾಗಿದ್ದು, ಎಸ್ಪಿ ರಾಜೇಂದ್ರಪ್ರಸಾದ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದರೆ ಸ್ಥಳಕ್ಕೆ ಪೊಲೀಸರು ಬರುವುದೇ ವಿಳಂಬವಾಗುತ್ತಿತ್ತು. ಇದರಿಂದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲದೆ ಅತಿ ವೇಗದ ಚಾಲನೆ, ಮದ್ಯಸೇವಿಸಿ ಚಾಲನೆ, ಅಕ್ರಮ ವಸ್ತುಗಳ ಸಾಗಾಟವೂ ನಡೆಯುತ್ತಿತ್ತು. ಅದನ್ನೆಲ್ಲ ಹತ್ತಿಕ್ಕುವ ಕೆಲಸವನ್ನು ಗಸ್ತುವಾಹನ ಮಾಡಲಿದೆ. ಈ ವಾಹನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಟೋಯೋಟಾ ಇನೋವಾ ಕಂಪನಿಯದ್ದಾಗಿವೆ. ಈ ವಾಹನಗಳಲ್ಲಿ ಕ್ಯಾಮೆರಾ, ಸರ್ಚ್ ಲೈಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಮೆಗಾಫೋನ್, ಗಾಯಾಳುಗಳನ್ನು ಸಾಗಿಸುವ ಸ್ಟ್ರಕ್ಚರ್, ಇನ್ವರ್ಟರ್ ಹಾಗೂ ಜಿಪಿಎಸ್ ಸೌಲಭ್ಯ ಹೊಂದಿವೆ. ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವ ವಾಹನಗಳು ಚಾಲನೆಯಲ್ಲಿರುತ್ತವೆ. ಹೀಗಾಗಿ ಒಂದು ವೇಳೆ ಅಪಘಾತ ಸಂಭವಿಸಿದ ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಸ್ಥಳಕ್ಕೆ ಗಸ್ತುವಾಹನ ಬರಲಿದೆ. ಇದರಲ್ಲಿ ಓರ್ವ ಚಾಲಕ, ಓರ್ವ ಸಹಾಯಕ ಠಾಣಾಧಿಕಾರಿ, ಸಿಬ್ಬಂದಿ ಇದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೊಡಗಿನ ಗಡಿಭಾಗ ಸಂಪಾಜೆವರೆಗೂ ಗಸ್ತು ತಿರುಗಲಿವೆ. ಯಾವುದೇ ಅಪಘಾತ ಸಂಭವಿಸಿದರೂ ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಾಳುಗಳ ನೆರವಿಗೆ ಬರಲಿದ್ದು, ಪ್ರಥಮ ಚಿಕಿತ್ಸೆ, ರಕ್ಷಣೆ, ಆಸ್ಪತ್ರೆಗೆ ಸಾಗಾಟ ಹೀಗೆ ಎಲ್ಲ ಕಾರ್ಯವನ್ನು ನಿರ್ವಹಿಸಲಿದೆ. ಜತೆಗೆ ಕಂಟ್ರೋಲ್ ರೂಂ ನೊಂದಿಗೆ ನೇರ ಸಂಪರ್ಕ ಸಾಧಿಸಿ ಅಧಿಕಾರಿಗಳಿಗೆ ನೇರ ಮಾಹಿತಿ ನೀಡಲಿದೆ.