ಹನೂರು: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದರಿಂದ ಒಳಗೆ ಮಲಗಿದ್ದ ಒಂಬತ್ತು ತಿಂಗಳ ಮಗು ಸಜೀವ ದಹನಗೊಂಡಿರುವ ಘಟನೆ ಮಲೈಮಹದೇಶ್ವರ ಬೆಟ್ಟ ಸಮೀಪದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಸೋಲಿಗರ ಹಾಡಿಯಲ್ಲಿ ಗುರುವಾರ ನಡೆದಿದೆ.
ಆಲಂಬಾಡಿ ಹಾಡಿಯ ನಿವಾಸಿ ಸುರೇಶ್ ಮತ್ತು ಮುತ್ತುಲಕ್ಷ್ಮಿ ದಂಪತಿಯ ಒಂಬತ್ತು ತಿಂಗಳ ಹೆಣ್ಣು ಮಗು ಮೃತಪಟ್ಟ ಬೆಂಕಿಗೆ ಆಹುತಿಯಾದ ಕಂದಮ್ಮ. ಸುರೇಶ್ ಮತ್ತು ಮುತ್ತುಲಕ್ಷ್ಮಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಮೊದಲ ಮಗುವಿಗೆ ನಾಲ್ಕೂವರೆ ವರ್ಷವಾಗಿದ್ದರೆ, ಎರಡನೆಯ ಮಗುವಿಗೆ ಒಂಬತ್ತು ತಿಂಗಳಾಗಿತ್ತು.
ಗುರುವಾರ ಅಡುಗೆ ಮಾಡಲೆಂದು ತಾಯಿ ಮುತ್ತುಲಕ್ಷ್ಮಿ ಗುಡಿಸಿಲಿನಲ್ಲಿ ಹಿರಿಯ ಮಗುವಿನ ಜತೆಗೆ ಪುಟ್ಟ ಕಂದಮ್ಮನನ್ನು ಬಿಟ್ಟು ಹೊರಗೆ ನೀರನ್ನು ತರಲೆಂದು ಹೋಗಿದ್ದಳು ಎನ್ನಲಾಗಿದೆ. ಈ ಸಂದರ್ಭ ಮನೆಯಲ್ಲಿದ್ದ ಬೆಂಕಿಯಿಂದ ಗುಡಿಸಲಿಗೆ ಬೆಂಕಿ ತಾಗಿ ಉರಿಯಲಾರಂಭಿಸಿದೆ. ತಕ್ಷಣ ಒಳಗಿದ್ದ ಮೊದಲ ಮಗು ಹೊರಗೆ ಬಂದು ಕಿರುಚಲಾರಂಭಿಸಿದೆ. ಅದೇ ವೇಳೆಗೆ ಮನೆಯಿಂದ ಬೆಂಕಿ ಹೊತ್ತಿ ಹೊಗೆ ಬರುತ್ತಿರುವುದನ್ನು ನೋಡಿದ ಸುತ್ತಮುತ್ತಲಿನವರು ಮನೆಯತ್ತ ಓಡಿ ಬರುವ ವೇಳೆಗೆ ಬೆಂಕಿ ಸಂಪೂರ್ಣವಾಗಿ ಆವರಿಸಿತ್ತು. ಬಳಿಕ ಬೆಂಕಿಯನ್ನು ಆರಿಸುವ ವೇಳೆಗೆ ಮಗು ಸಜೀವ ದಹನಗೊಂಡಿತ್ತು. ಈ ಬಗ್ಗೆ ಮಲೈಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಾಧಿಕಾರಿ ಚೇತನ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.