ಚಿಕ್ಕಮಗಳೂರು: ಸಮುದ್ರದ ಅಡಿ ಉಪ್ಪಿಗೆ ಬರವೆಂಬಂತೆ, ಐದು ನದಿಗಳು ಹುಟ್ಟಿ ಹರಿದರೂ ದಶಕಗಳಿಂದ್ಲೂ ನೂರಾರು ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಇಂದಿಗೂ ಜೀವಂತ. ಪಂಚ ನದಿಗಳ ತಾಯ್ನಾಡು ಕಾಫಿ ಕಣಿವೆಯಲ್ಲಿ ದಿನ ಕಳೆದಂತೆ ಕುಡಿಯೋ ನೀರಿನ ಸಮಸ್ಯೆ ಮೀತಿ ಮೀರ್ತಿದೆ. ಇತಿಹಾಸದಲ್ಲಿಯೇ ಮೊದಲ ಭಾರಿಗೆ ಮಲೆನಾಡಿನ ಮೂರು ತಾಲೂಕನ್ನ ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಇದು ಮಲೆನಾಡ ಮಗ್ಗಲಿನ ಕಥೆಯಾದ್ರೆ, ಅರೆಮಲೆನಾಡು ಹಾಗೂ ಬಯಲುಸೀಮೆ ವ್ಯಥೆ ಮತ್ತಷ್ಟು. ನೂರಾರು ವರ್ಷಗಳಿಂದ ವಾರ್ಷಿಕ ದಾಖಲೆ ಮಳೆ ಸುರಿಯೋ ಕಾಫಿನಾಡಲ್ಲಿ ಹನಿನೀರಿನ ಹಾಹಾಕಾರ ತೀವ್ರಗೊಂಡಿದೆ. ಇದು ದೀಪದ ಕೆಳಗಿನ ಕತ್ತಲ ಕಥೆ. ಸರದಿ ಸಾಲಲ್ಲಿ ಜೋಡಿಸಿರೋ ಕೊಡಗಳನ್ನಿಟ್ಟು ನಾಲ್ಕೈದು ದಿನಗಳೇ ಕಳೆದಿವೆ. ಯಾಕಂದ್ರೆ, ನೀರು ಬರೋದೆ ಎಂಟರಿಂದ ಹತ್ತು ದಿನಗಳಿಗೊಮ್ಮೆ. ಟ್ಯಾಂಕ್ ಬಳಿ ಕೊಡವನ್ನಿಟ್ಟು ಕೂಲಿಗೆ ಹೋಗೋ ರೈತರು ನೀರು ಬರೋ ಟೈಂಗೆ ಬಂದ್ಬಿಡ್ಬೇಕು. ಇಲ್ಲವಾದ್ರೆ ಮತ್ತೆ ನೀರು ಬರೋವರ್ಗೂ ಏನಕ್ಕೂ ನೀರಿರೋದಿಲ್ಲ. ಹೌದು, ಚಿಕ್ಕಮಗಳೂರಿನ ಅನತಿ ದೂರದ ಲಕ್ಯಾ, ಬೆಳವಾಡಿ, ಕಳಸಾಪುರದಲ್ಲಿ ಹನಿನೀರಿಗೂ ಹಾಹಾಕಾರವಿದ್ರೆ, ಕೆಲ ರೈತರು 20 ಲೀಟರ್ ನೀರಿಗೆ 30-40 ರೂಪಾಯಿ ಕೊಟ್ಟು ಕುಡಿಯುತ್ತಿದ್ದಾರೆ. ದನಕರುಗಳ ಕಥೆ ಹೇಳುವಂತಿಲ್ಲ. ಜಿಲ್ಲೇಲಿ ಐದು ನದಿಗಳು ಹುಟ್ಟಿದ್ರು, ಅದನ್ನ ಬಳಸಿಕೊಳ್ಳೊದ್ರಲ್ಲಿ ಸರ್ಕಾರ ಹಾಗೂ ಜನನಾಯಕರು ಸೋತಿದ್ದಾರೆ.
ಕಡೂರು, ತರೀಕೆರೆ, ಚಿಕ್ಕಮಗಳೂರಿನ ಕೆಲ ಭಾಗ ಶಾಶ್ವತ ಬರಗಾಲಕ್ಕೆ ತುತ್ತಾಗ್ತಿದೆ. ಆದ್ರೆ, ಇರೋ ಸೌಲಭ್ಯವನ್ನೆ ಬಳಸಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸೋ ಮನಸ್ಸು ಯಾರೊಬ್ಬರಿಗಿಲ್ಲದಿರೋದು ಮಾತ್ರ ದುರಂತ. ಚಿಕ್ಕಮಗಳೂರು, ಕಡೂರು, ಎನ್ ಆರ್ ಪುರ ಹಾಗೂ ಮೂಡಿಗೆರೆ ತಾಲೂಕುಗಳನ್ನ ಈಗಾಗಲೇ ಬರ ಪೀಡಿತ ತಾಲೂಕೆಂದು ಸರ್ಕಾರ ಘೋಷಣೆ ಮಾಡಿದೆ. ಹಿಂಗಾರು ಮಳೆಯಾದರದಲ್ಲಿ ತರೀಕೆರೆ ಹಾಗೂ ಕೊಪ್ಪ ತಾಲೂಕುಗಳನ್ನ ಬರಪೀಡಿತ ಪಟ್ಟಿಗೆ ಸೇರಿಸಬೇಕೆಂದು ಈಗಾಗಲೇ ಅಂತಿಮ ಪಟ್ಟಿಯನ್ನ ಜಿಲ್ಲಾಡಳಿತ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಮಲೆನಾಡಿನ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಮಲೆನಾಡು ಭಾಗದ ಮೂರು ತಾಲೂಕುಗಳನ್ನ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಬಯಲು ಸೀಮೆಯಷ್ಟೇ ಅಲ್ಲದೇ ಮಲೆನಾಡು ಭಾಗದಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಿದ್ದು, ಟ್ಯಾಂಕರ್ನದಲ್ಲಿ ನೀರು ಪೂರೈಸೋದ್ನ ಮಾತ್ರ ಬಿಟ್ಟಿಲ್ಲ. ಕಡೂರು, ಬೀರೂರು, ತರೀಕೆರೆಯ ಅಜ್ಜಂಪುರ ಸುತ್ತಮುತ್ತ ಹಾಗೂ ಚಿಕ್ಕಮಗಳೂರಿನ ಲಕ್ಯಾ, ಅಂಬಳೆ ಹೋಬಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯೋ ನೀರನ್ನ ಸರಬರಾಜು ಮಾಡಲಾಗುತ್ತಿದೆ. ಸ್ಥಳಿಯ ಸಂಸ್ಥೆಗಳು ತನ್ನ ಇತಿಮಿತಿಯಲ್ಲಿ ನೀರು ನೀಡ್ತಿದ್ರು ಸಾಕಾಗ್ತಿಲ್ಲ. ಇನ್ನು ನೀರು, ಮೇವಿಲ್ಲದೆ ಮೂಕಪ್ರಾಣಿಗಳ ರೋಧನ ಕೇಳುವಂತಿಲ್ಲ. ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1200 ಅಡಿಗೂ ಮೀರಿ 150 ರಿಂದ 200 ಬೋರ್ ಕೊರೆಸಿದ್ರು ಒಂದ್ ಬೋರಲ್ಲೂ ಒಂದನಿ ನೀರು ಬಂದಿಲ್ಲ. ಆಧುನಿಕತೆ ಇಷ್ಟೊಂದು ಮುಂದುವರೆದಿದ್ರು ಇಂದಿಗೂ ರೈತರು ಕೈಪಂಪ್ ಬೋರ್ವೆಲ್ ಗಳನ್ನ ಆಶ್ರಯಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯ ಸುಮಾರು 100 ಕ್ಕೂ ಅಧಿಕ ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಗಂಭೀರದ್ದಾಗಿದೆ. ನೀರಿಗಾಗಿ ಜನ ಬೀದಿಗಿಳಿದಾಗ ಎಚ್ಚೆತ್ತುಕೊಳ್ಳೋ ಅಧಿಕಾರಿಗಳು ಟ್ಯಾಂಕರ್ನಕಲ್ಲಿ ನೀರು ಕೊಡ್ತೀವಿ ಎಂದೇಳಿ ಒಂದೆರಡು ದಿನ ನೀಡಿ ಕೈತೊಳೆದುಕೊಳ್ತಾರೆ. ಹಳ್ಳಿಗರು ದಿನನಿತ್ಯದ ನೀರಿಗೆ ಮತ್ತದೇ ಕಷ್ಟ ಪಡ್ಬೇಕು. ಹೀಗೆ ಸರ್ಕಾರ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡೋ ಬದಲು, ಜಿಲ್ಲೆಯಲ್ಲಿ ನಾಲ್ಕೈದು ನೀರಾವರಿ ಯೋಜನೆಗಳಿವೆ. ಯಾವುದಾದ್ರು ಒಂದು ಯೋಜನೆಯಿಂದ ಕುಡಿಯೋ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಹುದು. ಐದು ನದಿಯುಟ್ಟೋ ಜಿಲ್ಲೆಯಲ್ಲಿ ಎರಡ್ಮೂರು ಟಿಎಂಸಿ ನೀರನ್ನ ಬಳಸಿಕೊಂಡ್ರೆ ಬರಪೀಡಿತ ತಾಲೂಕುಗಳಿಗೆ ಸಮೃದ್ಧ ನೀರಾವರಿ ಸೌಲಭ್ಯವಾಗಲಿದೆ. ಆದ್ರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಆ ಯೋಚನೆ ಇಲ್ಲದಿರೋದು ಮಾತ್ರ ರೈತರ ದುರಾದೃಷ್ಟವೇ ಸರಿ.