ಮಡಿಕೇರಿ: ಎಪಿಎಂಸಿ ಸದಸ್ಯರೊಬ್ಬರು ಪಾಲೇಮಾಡಿನ ನಿವಾಸಿಗಳ ಪರವಾದ ದಲಿತ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಪಾಲೇಮಾಡು ಭೀಮಸೇನಾ ಸಮಿತಿ ಜಿಲ್ಲಾಡಳಿತ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ್ ಜಗದೀಶ್, ಪಾಲೇಮಾಡಿನ ಸ್ಮಶಾನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಸದಸ್ಯರೊಬ್ಬರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಮುಂದೆ ಆಗುವ ಅನಾಹುತಗಳಿಗೆ ಈ ಸದಸ್ಯರೇ ನೇರ ಹೊಣೆಗಾರರೆಂದು ಎಚ್ಚರಿಕೆ ನೀಡಿದ್ದಾರೆ. ಸ್ಮಶಾನಕ್ಕಾಗಿ 2009-10 ರಲ್ಲಿ ಜಾಗ ಮಂಜೂರಾತಿಯಾಗಿದ್ದರೂ ಈ ಬಗ್ಗೆ ಮಾಹಿತಿ ಪಡೆಯದೆ ವಿನಾಕಾರಣ ಬಡ ವರ್ಗದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ.
ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಜಾಗದ ವಿವಾದದ ಕುರಿತು ಹೇಳಿಕೆ ನೀಡುತ್ತಿರುವ ಎಪಿಎಂಸಿ ಸದಸ್ಯರು ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ರಾಜಕೀಯ ಪ್ರಭಾವ ಬಳಸಿ ಶಿಕ್ಷೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಇದೀಗ ಮತ್ತೆ ದಲಿತರ ಮೇಲೆ ದೌರ್ಜನ್ಯ ತೋರುತ್ತಿದ್ದಾರೆ ಎಂದು ಕಿರಣ್ ಜಗದೀಶ್ ಆರೋಪಿಸಿದ್ದಾರೆ.
ಬಹುಜನ ಕಾರ್ಮಿಕ ಸಂಘಟನೆಯ ಮುಖಂಡ ದಲಿತರು ಹಾಗೂ ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದು, ಇದನ್ನು ಸಹಿಸದವರು ಮೊಣ್ಣಪ್ಪ ಅವರ ಗಡಿಪಾರಿಗೆ ಒತ್ತಾಯಿಸುತ್ತಿದ್ದಾರೆ. ಬಡವರ ಧ್ವನಿಯಾಗಿರುವ ಮೊಣ್ಣಪ್ಪ ಅವರನ್ನು ಗಡಿಪಾರು ಮಾಡಬೇಕೆ ಅಥವಾ ಗಡಿಪಾರಿಗೆ ಒತ್ತಾಯಿಸಿರುವ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಎಪಿಎಂಸಿ ಸದಸ್ಯರನ್ನು ಗಡಿಪಾರು ಮಾಡಬೇಕೆ ಎನ್ನುವುದನ್ನು ಜಿಲ್ಲಾಡಳಿತ ನಿರ್ಧರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸ್ಮಶಾನ ಜಾಗದ ವಿವಾದವನ್ನು ಶೀಘ್ರ ಬಗೆಹರಿಸುವ ಮೂಲಕ ಪಾಲೇಮಾಡಿನ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು ಮತ್ತು ದಲಿತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಎಪಿಎಂಸಿ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಿರಣ್ ಜಗದೀಶ್ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಸಂಘಟನೆಯ ಮೂಲಕವೇ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಲಹೆಗಾರರಾದ ಕೆ.ಪೂವಣಿ ಪ್ರಮುಖರಾದ ವೈ.ಕೆ.ಮಣಿ ಹಾಗೂ ಪಿ.ಬಿ.ರಾಜು ಉಪಸ್ಥಿತರಿದ್ದರು.