ಚಾಮರಾಜನಗರ: ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಅಭ್ಯರ್ಥಿಯಾಗಿ ಮಹದೇವಪ್ರಸಾದ್ ಅವರ ಪತ್ನಿ ಗೀತಾರವರೇ ಕಣಕ್ಕೆ ಇಳಿಯುವುದು ಖಚಿತವಾಗಿದ್ದು, ಅವರನ್ನು ಗೆಲ್ಲಿಸಿಕೊಡುವ ಜವಬ್ದಾರಿ ಸಚಿವ ಯು.ಟಿ.ಖಾದರ್ ಹೆಗಲಿಗೇರಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಸಚಿವರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ನಾಯಕರ ಸಭೆ ನಡೆಸಿ ಗೆಲುವಿಗಾಗಿ ಶ್ರಮಿಸಬೇಕೆಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮವೂ ಆರಂಭಗೊಂಡಿದ್ದು ಖುದ್ದು ಮುಖ್ಯಮಂತ್ರಿಗಳೇ ಕ್ಷೇತ್ರಕ್ಕೆ ಬರುತ್ತಿರುವುದು ಉಪ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಸಾಬೀತು ಮಾಡುತ್ತಿದೆ.
ಚಾಮರಾಜನಗರಕ್ಕೆ ಉಸ್ತುವಾರಿ ಸಚಿವರನ್ನಾಗಿ ಯು.ಟಿ.ಖಾದರ್ ಅವರನ್ನು ಸರ್ಕಾರ ನೇಮಕ ಮಾಡಿದ್ದು, ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆ ಅವರಿಗೆ ಸವಾಲ್ ಆಗಿ ಪರಿಣಮಿಸಿದೆ. ಇಲ್ಲಿ ಗೆಲುವು ಕಂಡರೆ ಅದರ ಕ್ರೆಡಿಟ್ ಖಾದರ್ ಅವರಿಗೆ ಸಿಗಲಿದೆ. ಹೀಗಾಗಿ ಅವರು ತಮ್ಮ ವರ್ಚಸ್ಸನ್ನು ಇನ್ನಷ್ಟು ಇಮ್ಮಡಿಗೊಳಿಸಬೇಕಾದರೆ ಕಾರ್ಯಕರ್ತರ, ಮುಖಂಡರ ಸಹಕಾರವನ್ನು ಪಡೆದು ಗೀತಾ ಮಹದೇವಪ್ರಸಾದ್ ಅವರ ಗೆಲುವಿಗೆ ಪಣ ತೊಡುವುದು ಅನಿವಾರ್ಯವಾಗಿದೆ.
ಮಹದೇವಪ್ರಸಾದ್ ನಿಧನದ ಬಳಿಕ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಉಳಿದಿಲ್ಲ. ಹೀಗಾಗಿ ಬಹಳಷ್ಟು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಿರುವಾಗ ಗೆಲುವು ಅಷ್ಟು ಸುಲಭವಲ್ಲ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಮತಪಡೆಯುವ ಸ್ಥಿತಿಯಲ್ಲಿ ನಾಯಕರಿಲ್ಲ. ಇದರಿಂದಾಗಿ ಸದ್ಯದ ಮಟ್ಟಿಗೆ ಖಾದರ್ ಅವರು ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿಂದ ಬಡ ಜನರಿಗಾದ ಎಫೆಕ್ಟ್ ಬಗ್ಗೆ ತಿಳಿಸಿ ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನ ಮಾಡಿ ಎಂದು ಸೂಚಿಸಿದ್ದಾರೆ. ಮುಖಂಡರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಗೆಲುವಿಗೆ ಶ್ರಮಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಕೇವಲ ಗುಂಡ್ಲುಪೇಟೆ ಉಪ ಚುನಾವಣೆಯನ್ನಷ್ಟೆ ಪ್ರಮುಖವಾಗಿಟ್ಟು ಕೆಲಸ ಮಾಡಬೇಡಿ ಮುಂದಿನ 2018 ವಿಧಾನಸಭಾ ಚುನಾವಣೆಯೂ ಗಮನದಲ್ಲಿರಲಿ. ಈಗಿನಿಂದಲೇ ಕಾರ್ಯಚಟುವಟಿಕೆಗಳು ಆರಂಭಿಸುವಂತೆ ಸಭೆ ನಡೆಸಿ ಸೂಚಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಕೇವಲ ಆರೋಪಗಳನ್ನು ಮಾತ್ರ ಮಾಡಿಕೊಂಡು ಚುನಾವಣೆಗೆ ಮುಂದಾಗುತ್ತಿವೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರು ವಿಚಲಿತಾಗಬೇಕಾಗಿಲ್ಲ ನಮ್ಮ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಜಾಗೃತಿಗೊಳಿಸುವ ಮೂಲಕ ಚುನಾವಣೆಗೆ ಸಜ್ಜಾಗಬೇಕು. ಇದಕ್ಕೆ ಬೂತ್ ಮಟ್ಟದಿಂದಲೇ ಕೆಲಸ ಆರಂಭವಾಗಬೇಕೆಂದು ಅವರು ತಿಳಿಸಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ…