ಕಡೂರು: ಕಡೂರು ವಿದ್ಯುತ್ ಲೈನಿನ ಕಾಮಗಾರಿ ವೇಳೆ ಕಡೂರು ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಭದ್ರಾ ನದಿ ಪೈಪ್ಲೈನ್ ಒಡೆದು ಪಟ್ಟಣಕ್ಕೆ ತಾತ್ಕಾಲಿಕವಾಗಿ ನೀರು ಪೂರೈಕೆ ಬಂದ್ ಆಗಿದೆ. ಭದ್ರಾ ನದಿಯಿಂದ ಕಡೂರು ಪಟ್ಟಣಕ್ಕೆ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ರಸ್ತೆ ಪಕ್ಕದಲ್ಲಿ ಕುಡಿವ ನೀರಿನ ಪೈಪ್ ಲೈನ್ ಅಳವಡಿಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.
ಇತ್ತ ಕಡೂರು ಬೀರೂರು ಮದ್ಯೆ ಇರುವ ಮೆಸ್ಕಾಂನ ಎಂವಿಎಸ್ಎಸ್ ರಿಸೀವಿಂಗ್ ಸ್ಟೇಷನ್ನಿಂದ ಎಮ್ಮೇದೊಡ್ಡಿಯಲ್ಲಿ ನಿರ್ಮಾಣವಾಗುತ್ತಿರುವ 11ಕೆವಿ. ವಿದ್ಯುತ್ ಘಟಕ ಕಾಮಗಾರಿ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ನಡೆಯುತಿರುವಾಗ ಲೈನ್ ಎಳೆದು ಕಂಬ ನಡೆಲು ಗುಂಡಿ ಬಗೆಯುತ್ತಿದ್ದಾಗ ದಿಢೀರ್ ಎಂದು ಪೈಪ್ ಲೈನ್ ಒಡೆದು ಬುಗ್ಗೆಯಾಗಿ ಇಡೀ ರಸ್ತೆಯಲ್ಲಿ ನೀರು ಹರಿಯಲಾರಂಭಿಸಿ ಪಟ್ಟಣಕ್ಕೆ ನೀರು ಪೂರೈಕೆ ಕೂಡಲೇ ಸ್ಥಗಿತಗೊಂಡಿತು.ವಿಷಯ ತಿಳಿಯುತ್ತಿದ್ದಂತೆ ಕಡೂರು ಪುರಸಭೆ ಅಧ್ಯಕ್ಷ ಎಂ.ಮಾದಪ್ಪ ಪುರಸಭೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿದ್ಯುತ್ ಕಾಮಗಾರಿ ಗುತ್ತಿಗೆದಾರರ ಭೇಜವಬ್ದಾರಿಯಿಂದ ಈ ಅವಘಡ ನಡೆದಿದೆ ಎಂದು ಕೂಡಲೇ ಅಧಿಕಾರಿಗಳ ಮೂಲಕ ಪೊಲೀಸರಿಗೆ ದೂರು ನೀಡಲು ಮುಂದಾದರು. ಅಮೇಲೆ ಗುತ್ತಿಗೆದಾರರು ಪೈಪ್ಲೈನ್ ದುರಸ್ತಿ ಪಡಿಸಿಕೊಡುವುದಾಗಿ ಒಪ್ಪಿದ್ದರಿಂದ ದೂರು ನೀಡಲಿಲ್ಲ.