ಕಡೂರು: ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ 5, 7 ಹಾಗೂ 8ನೇ ವಾರ್ಡಿಗೆ ಭದ್ರಾ ಕುಡಿಯುವ ನೀರು ಯೋಜನೆಯಿಂದ ಶೀಘ್ರದಲ್ಲೇ ನೀರನ್ನು ಕೊಡುವ ಉದ್ದೇಶ ಹೊಂದಿದ್ದು, ಪೈಪ್ಲೈನ್ ಅಳವಡಿಸುವ ಕಾರ್ಯ ಅತ್ಯಂತ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎಂ. ಮಾದಪ್ಪ ತಿಳಿಸಿದರು.
ದೇವರಾಜು ಅರಸ್ ರಸ್ತೆಯಲ್ಲಿ ಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಮಾತನಾಡಿದರು. ಈಗಾಗಲೇ ಬಹಳಷ್ಟು ವಾರ್ಡುಗಳಿಗೆ ಭದ್ರಾ ನೀರನ್ನು ನೀಡಲಾಗುತ್ತಿದೆ. ಆದಷ್ಟು ಬೇಗ 5, 7 ಹಾಗೂ 8ನೇ ವಾರ್ಡ್ ಳಿಗೆ ನೀಡುವ ಉದ್ದೇಶದಿಂದ ಕಾಮಗಾರಿಯನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ 5ನೇ ವಾರ್ಡಿಗೂ ಈ ಯೋಜನೆಯಡಿಯಲ್ಲಿ ಕುಡಿಯುವ ನೀರನ್ನು ನೀಡಲು ಆ ಭಾಗಕ್ಕೂ 20 ಲಕ್ಷ ರೂಗಳ ಕಾಮಗಾರಿ ಪ್ರಗತಿಯಲ್ಲಿದೆ.
ಬಿರು ಬೇಸಿಗೆಯಿದ್ದರೂ ಬರಗಾಲದಿಂದ ತತ್ತರಿಸಿದ್ದರೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದ ರೀತಿಯಲ್ಲಿ ಸಮರ್ಪಕವಾಗಿ ಇಡೀ ಪಟ್ಟಣಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು. ಇಡೀ ರಾಜ್ಯದಲ್ಲಿ ಬರಗಾಲದಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ 5 ನದಿಗಳು ಹುಟ್ಟಿದರೂ ಸಹ ಮಲೆನಾಡು ಭಾಗದಲ್ಲೇ ಕುಡಿಯುವ ನೀರಿಗೆ ತೊಂದರೆಯಾಗಿದೆ. ಆದರೆ ಕಡೂರು ಸಾರ್ವಜನಿಕರಿಗೆ ಕುಡಿಯುವ ನೀರಿನ ಬೆಲೆ ತಿಳಿಯಬೇಕಿದೆ. ಕೆಲವು ವಾರ್ಡುಗಳಲ್ಲಿ ನೀರನ್ನು ಪೋಲು ಮಾಡುತ್ತಿದ್ದು, ಇನ್ನೂ ಕೆಲವು ಭಾಗಗಳಲ್ಲಿ ತಮ್ಮ ನೀರಿನ ತೊಟ್ಟಿ ತುಂಬಿದ್ದರೂ ರಸ್ತೆಗಳಲ್ಲಿ ಹರಿದು ಹೋಗುತ್ತಿರುವ ನಿದರ್ಶನಗಳಿವೆ. ಬೇಸಿಗೆ ಮುಗಿಯುವವರೆಗೂ ನೀರನ್ನು ಮಿತವಾಗಿ ಬಳಸುವುದರ ಮೂಲಕ ಪುರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕಿದೆ ಎಂದು ತಿಳಿಸಿದರು.