ಚಿಕ್ಕಮಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡ ಕಿಡ್ನಾಪ್ ಪ್ರಕರಣ ಸಂಬಂಧ ಪ್ರವೀಣ್ ಖಾಂಡ್ಯ ಸಿಗೋವರ್ಗೂ ಅವನೇ ಪ್ರಕರಣದ ಕಿಂಗ್ ಪಿನ್ ಎಂದು ಹೇಳಲಾಗ್ತಿತ್ತು. ಆದ್ರೆ, ಸಿಐಡಿ ಅಧಿಕಾರಿಗಳ ಮುಂದೆ ಪ್ರವೀಣ್ ಖಾಂಡ್ಯ ಬಾಯ್ಬಿಟ್ಟಿರೋ ಸತ್ಯ ನೋಡಿದ್ರೆ ಪ್ರಕರಣದ ದಿಕ್ಕೆ ಬದಲಾಗುವಂತಿದೆ. ಯಾಕಂದ್ರೆ, ಪ್ರಕರಣದಲ್ಲಿ ಬಂಧಿತರಾದೋರೆಲ್ಲಾ ಒಂದೊಂದು ರೀತಿ ಹೇಳಿಕೆ ನೀಡ್ತಿರೋದ್ನ ಗಮನಿಸಿದ್ರೆ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ನ್ಯಾಯ ಸಿಗೋದಿರ್ಲಿ, ಕಾರಣವೂ ಸಿಗೋದು ಅನುಮಾನವೇ ಸರಿ.
ಜುಲೈ ಐದರಂದು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪ್ರಕರಣದ ಕಿಂಗ್ ಪಿನ್ ಎಂದೇ ಹೇಳಲಾಗ್ತಿದ್ದ ಪ್ರವೀಣ್ ಖಾಂಡ್ಯನ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಇದೇ ವೇಳೆ, ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಐದಾರು ತಿಂಗಳು ಪ್ರವೀಣ್ ಖಾಂಡ್ಯ ನಾಪತ್ತೆಯಾಗಿದ್ದು ಆರೋಪ ಅವನತ್ತ ಬೊಟ್ಟು ಮಾಡಿತ್ತು. ಪೊಲೀಸರು ಕೂಡ ಸಿಬ್ಬಂದಿಯ ಸಾವಿಗೆ ನ್ಯಾಯ ಕೊಡಿಸ್ಬೇಕೆಂದು ಖಾಂಡ್ಯನಿಗಾಗಿ ಊರೂರು ಅಲೆದ್ರು. ಆದ್ರೀಗ, ಪ್ರವೀಣ್ ಖಾಂಡ್ಯ ಸಿಐಡಿ ಮುಂದೆ ಹೇಳಿರೋ ಹೇಳಿಕೆ ಗಮನಿಸಿದ್ರೆ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡ್ಕೊಂಡಿದ್ಯಾಕೆ ಅನ್ನೋ ಅನುಮಾನ ಮತ್ತಷ್ಟು ಬಲವಾಗತ್ತೆ. ಪ್ರಕರಣದಲ್ಲಿ ಬಂಧಿತರಾದೋರೆಲ್ಲಾ ಕಲ್ಲಪ್ಪ ಪಾತ್ರ ಇಲ್ಲ ಅನ್ನೋರೆ ಹೆಚ್ಚಿದ್ದಾರೆ. ಹಾಗಾದ್ರೆ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡ್ಕೊಂಡಿದ್ಯಾಕೆ, ಅವರ ಸಾವಿಗೆ ನ್ಯಾಯ ಸಿಗುತ್ತಾ ಅನ್ನೋ ಅನುಮಾನ ಮತ್ತಷ್ಟು ಹೆಚ್ಚಾಗುತ್ತೆ. ಕಲ್ಲಪ್ಪ ಆತ್ಮಹತ್ಯೆ ಪ್ರಕರಣದಲ್ಲಿ ಪ್ರವೀಣ್ ಖಾಂಡ್ಯನೆ ಕಿಂಗ್ ಪಿನ್ ಎಂದು ಹೇಳಲಾಗ್ತಿತ್ತು.
ಆದ್ರೆ, ಆತ ಸಿಐಡಿ ಮುಂದೆ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ. ತೇಜಸ್ ಗೌಡ ಆತ್ಮಹತ್ಯೆ ಪ್ರಕರಣದಲ್ಲೂ ನನ್ನ ಹಾಗೂ ಕಲ್ಲಪ್ಪರ ಪಾತ್ರವಿಲ್ಲ. ಅಸಲಿಗೆ ತೇಜಸ್ ಗೌಡ ಕಿಡ್ನಾಪ್ ಆಗೇ ಇಲ್ಲ, ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದ್ದಾನೆ. ಕಲ್ಮನೆ ನಟರಾಜ್ ಗೆ ತೇಜಸ್ ಗೌಡ ಕೊಡ್ಬೇಕಿದ್ದ ಹಣವನ್ನ ಕೊಡಿಸೋಕೆ ಮಧ್ಯಸ್ಥಿಕೆ ವಹಿಸಿದ್ದು ಸತ್ಯವಷ್ಟೆ. ಉಳಿದ ಯಾವ ಘಟನೆಯಲ್ಲೂ ನನ್ನ ಹಾಗೂ ಕಲ್ಲಪ್ಪರ ಪಾತ್ರ ಇರಲಿಲ್ಲ ಎಂದು ಹೇಳಿದ್ದಾನೆ ಅಂತಿವೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳು. ಪ್ರಕರಣದಲ್ಲಿ ಕೇಳಿ ಬಂದ ಎಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಸಿಐಡಿ ಪೊಲೀಸರು.
ಆದ್ರೀಗ, ಅಂತಿಮವಾಗಿ ಅವ್ರ ವರದಿ ಏನಿರುತ್ತೆ ಅನ್ನೋದು ಮತ್ತಷ್ಟು ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ ಪೊಲೀಸರ ತನಿಖೆ, ಆರೋಪಿಗಳ ವಿಚಾರಣೆ ಬಳಿಕ ತೇಜಸ್ ಗೌಡನ ಕಿಡ್ನಾಪ್ ಪ್ರಕರಣದಲ್ಲಿ ಕಲ್ಲಪ್ಪ ಹಂಡಿಭಾಗ್ ನಿರ್ದೋಶಿ ಅನ್ನೋದು ಮೇಲ್ನೋಟಕ್ಕೆ ಕಾಣ್ತಿದೆ. ಆದ್ರೆ, ಪ್ರಕರಣ ಕೋರ್ಟ್ನನಲ್ಲಿದ್ದು ವಾದ-ವಿವಾದಗಳಿಂದ ಮತ್ತಿನ್ಯಾವ ಸತ್ಯಗಳು ಹೊರಬರುತ್ತೋ ಗೊತ್ತಿಲ್ಲ. ಅದೇನೆ ಇದ್ರು, ಕ್ರಿಕೆಟ್ ಬೆಟ್ಟಿಂಗ್, ಜೂಜುಕೋರರ ಕಣ್ಣಾಮುಚ್ಚಾಲೆ ಆಟಕ್ಕೆ ನಿಷ್ಠಾವಂತ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡ್ಕೊಂಡಿದ್ದು ಮಾತ್ರ ನಿಜಕ್ಕೂ ದುರಂತ.