ಗುಂಡ್ಲುಪೇಟೆ: ಹುಲಿಯೊಂದು ದಾಳಿ ನಡೆಸಿ ಆನೆ ಮರಿಯನ್ನು ಸಾಯಿಸಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ಉದ್ಯಾನದ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ನಲ್ಲಿ ಘಟನೆ ನಡೆದಿದ್ದು, ಸಾವನ್ನಪ್ಪಿರುವ ಗಂಡು ಆನೆ ಮರಿ ಸುಮಾರು ಒಂದೂವರೆ ವರ್ಷದ್ದು ಎಂದು ತಿಳಿದು ಬಂದಿದೆ.
ಹಿಂಡಿನಲ್ಲಿದ್ದ ಮರಿ ತಾಯಿ ಆನೆಯಿಂದ ಬೇರ್ಪಟ್ಟ ಸಂದರ್ಭ ಹುಲಿ ದಾಳಿ ಮಾಡಿ ಹತ್ಯೆಗೈದಿರಬಹುದು ಎಂದು ಅಂದಾಜಿಸಲಾಗಿದೆ. ಆನೆ ಮರಿ ಸತ್ತ ಸ್ಥಳದಲ್ಲಿ ಹುಲಿಯ ಹೆಜ್ಜೆಗಳು ಕಂಡು ಬಂದಿರುವುದರಿಂದ ಹುಲಿ ದಾಳಿಯಿಂದಲೇ ಸಾವನ್ನಪ್ಪಿರುವುದು ಖಚಿತಪಟ್ಟಿದೆ.
ಉದ್ಯಾನದಲ್ಲಿ ಗಸ್ತು ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ನಲ್ಲಿ ಆನೆ ಮರಿಯೊಂದು ಮಲಗಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ ಕುಂದಕೆರೆ ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಂ, ಪಶುವೈದ್ಯ ಡಾ.ನಾಗರಾಜು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.