ಮಡಿಕೇರಿ: ಉಚಿತವಾಗಿ 3 ಕೆ.ಜಿ. ಅಕ್ಕಿಗೆ ಬದಲಾಗಿ 3 ಏಕರೆ ಭೂಮಿಯನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅವರ ನೇತೃತ್ವದಲ್ಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ಒತ್ತುವರಿದಾರರಿಂದ ಸರ್ಕಾರ ವಶಪಡಿಸಿಕೊಂಡಿರುವ ಭೂಮಿಯನ್ನು ಹಂಚಬೇಕು, ರಾಜ್ಯ ಸರ್ಕಾರ ಪ್ರತ್ಯೇಕ ದಲಿತ ಬಜೆಟ್ ಮಂಡನೆಗೆ ಕ್ರಮ ಕೈಗೊಳ್ಳಬೇಕು, ದಲಿತರ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ನಡೆಸಲು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಶೇಷ ಅಧಿವೇಶನಕ್ಕೆ ಅವಕಾಶ ಕಲ್ಪಿಸಬೇಕು, ವೀರಾಜಪೆೇಟೆಯ ಹರಿಕೇರಿ ಬ್ಲಾಕ್ ನಂಬರ್ 5 ರಲ್ಲಿ ಸುಮಾರು ಐದು ತಲೆಮಾರಿನಿಂದ ವಾಸವಿರುವ 5 ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು.
ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯನ್ನು ತುಂಬಬೇಕು, ಆಸ್ಪತ್ರೆಗಳಿಗೆ ಅತ್ಯಾಧುನಿಕ ಯಂತ್ರಗಳು ಹಾಗೂ ಸಮರ್ಪಕ ಔಷಧಿ ವ್ಯವಸ್ಥೆಯನ್ನು ಕಲ್ಪಿಸಬೇಕು, ಪಡಿತರ ಚೀಟಿಯ ಅವ್ಯವಸ್ಥೆಯನ್ನು ಸರಿಪಡಿಸಿ ಆಧಾರ್ ಕಾರ್ಡ್ ಕಡ್ಡಾಯದ ಕ್ರಮವನ್ನು ಕೈಬಿಡಬೇಕು, ಗೊಣಿಕೊಪ್ಪಲು ಪೌರ ಕಾರ್ಮಿಕ ವಸತಿ ಗೃಹವನ್ನು ದುರಸ್ತಿ ಪಡಿಸಬೇಕು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪೌರ ಕಾರ್ಮಿಕರಿಗೆ ಬೆಳಗ್ಗಿನ ಉಪಾಹಾರವನ್ನು ನೀಡಬೇಕು, ವೀರಾಜಪೇಟೆಯ ಬಿರುನಾಣಿ ಉದ್ದಮಲೆ ಪೈಸಾರಿಯಲ್ಲಿ ಸುಮಾರು 2 ಏಕರೆ ಪ್ರದೇಶವನ್ನು 50 ಮಂದಿಗೆ ಹಂಚಲಾಗಿದ್ದರು ಈ ಭೂಮಿ ಇಬ್ಬರು ಶ್ರೀಮಂತರ ಪಾಲಾಗಿದೆ. ಸರ್ಕಾರ ಇದನ್ನು ತಕ್ಷಣ ಹಿಂಪಡೆದು ಬಡವರಿಗೆ ಹಂಚಬೇಕು, ಭೂ ಸಮಿತಿ ಕಾಯ್ದೆಯನ್ನು ಜಾರಿಗೆ ತರಬೇಕು, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ದೇವರಕಾಡು ಪೈಸಾರಿಯಲ್ಲಿ ವಾಸವಿರುವ ದೇವರಪುರ ಗ್ರಾಮದ 150 ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಾನವೀಯತೆಯ ಆಧಾರದಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಡಿಕೆೇರಿ ತಾಲ್ಲೂಕು ಸಂಚಾಲಕಿ ಬಿ.ಆರ್.ಮೇರಿ, ಜಿಲ್ಲಾ ಸಂಘಟನಾ ಸಂಚಾಲಕ ವಿ.ಎಸ್.ರಜನೀಕಾಂತ್, ತಾಲ್ಲೂಕು ಸಂಘಟನಾ ಸಂಚಾಲಕ ಎಂ. ಜಗದೀಶ್, ಪ್ರಮುಖರಾದ ಕುಡಿಯರ ಮುತ್ತಪ್ಪ, ಬಹುಜನ ಕಾರ್ಮಿಕರ ಸಂಘದ ಅಧ್ಯಕ್ಷ ಮೊಣ್ಣಪ್ಪ, ಸದಸ್ಯರಾದ ಸುಶೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.